ರಾಜ್ಯ

ಕೆಪಿಟಿಸಿಎಲ್ ಅಕ್ರಮ ನೇಮಕಾತಿ ಹಗರಣ: ಮತ್ತಿಬ್ಬರು ಆರೋಪಿಗಳ ಬಂಧನ

Srinivasamurthy VN

ಬೆಳಗಾವಿ: ಕೆಪಿಟಿಸಿಎಲ್ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲೋಳಸೂರ ಗ್ರಾಮದ ಯಲ್ಲಪ್ಪ ಮಹದೇವಪ್ಪ ರಕ್ಷಿ (26), ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ನಾಗಪ್ಪ ದೊಡ್ಡಮನಿ (27) ಬಂಧಿತ ಆರೋಪಿಗಳಾಗಿದ್ದು ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಆರೋಪಿಗಳು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಮಲ್ಲಪ್ಪ ರಕ್ಷಿ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷಾ ಅಭ್ಯರ್ಥಿಗಳಿಗೆ ಕೊಟ್ಟಿದ್ದಲ್ಲದೇ, ಉತ್ತರ ಹೇಳಿದ ಆರೋಪವಿದೆ. ಆತನ ಬಳಿಯಿದ್ದ ಒಂದು ಮೊಬೈಲ್, ಕಾರು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ನಾಗೇಶ ದೊಡ್ಡಮನಿ ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದ ಆರೋಪವಿದೆ. ಈ ನಡುವೆ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್‌ಪಿನ್ ಸಂಜೀವ ಲಕ್ಷ್ಮಣ ಭಂಡಾರಿ ಸೇರಿದಂತೆ 20 ಆರೋಪಿಗಳಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಜೆಎಂಎಫ್‌ಸಿ ಎರಡನೇ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. 

ಈ ನಡುವೆ ಸಂಜೀವ ಭಂಡಾರಿ ಜಾಮೀನು ಪಡೆದು ಕೋರ್ಟ್‌ನಿಂದ ಹೊರಬರುತ್ತಿದ್ದಂತೆಯೇ ಆತನನ್ನು ಇನ್ನೊಂದು ಪ್ರಕರಣದಲ್ಲಿ ಬಂಧಿಸಲಾಗಿದೆ. ಕೆಪಿಟಿಸಿಎಲ್ ಅಕ್ರಮದ ಪ್ರಮುಖ ಆರೋಪಿಯಾಗಿರುವ ಬೆಳಗಾವಿ ಮೂಲದ ಸಂಜೀವ್ ಲಕ್ಷ್ಮಣ ಭಂಡಾರಿ ಜಾಮೀನು ಸಿಕ್ಕು ಹೊರಬರುತ್ತಿದ್ದಂತೆ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅಕ್ರಮದಲ್ಲಿ ಮತ್ತೆ ಅರೆಸ್ಟ್ ಆಗಿದ್ದಾನೆ. ಬೆಳಗಾವಿಯ ಹಿಂಡಲಗಾ ಜೈಲು ಮುಂದೆಯೇ ಸಿಐಡಿ ಅಧಿಕಾರಿಗಳು ಆತನಿಗೆ ಬಲೆ ಹಾಕಿದ್ದಾರೆ. ಈತನ ಮೇಲೆ 2021ರಲ್ಲಿ ನಡೆದಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲೂ ಅಕ್ರಮ ಎಸಗಿರುವ ಆರೋಪವಿದೆ. 

ಇದೀಗ ಸಂಜೀವ ಭಂಡಾರಿಯನ್ನು ಬೆಳಗಾವಿಯ ಐದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಲಾಗಿದೆ.
 

SCROLL FOR NEXT