ರಾಜ್ಯ

ಶೀಘ್ರದಲ್ಲೇ ದೆಹಲಿಗೆ ಪ್ರಯಾಣ, ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಕಾದು ನೋಡಿ: ಬಸವರಾಜ ಬೊಮ್ಮಾಯಿ

Ramyashree GN

ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಕುರಿತು ಚರ್ಚಿಸಲು ಬಿಜೆಪಿ ಹೈಕಮಾಂಡ್ ಅನ್ನು ಭೇಟಿ ಮಾಡಲು ಶೀಘ್ರದಲ್ಲೇ ದೆಹಲಿಗೆ ತೆರಳುವುದಾಗಿ ಹೇಳಿದ್ದು, ಆದರೆ, ಇದು ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದನ್ನು ಕಾದುನೋಡಿ ಎಂದು ಹೇಳಿದ್ದಾರೆ.

ಸಂಪುಟಕ್ಕೆ ಯಾರನ್ನು ಸೇರ್ಪಡೆಗೊಳಿಸಬೇಕು ಎಂಬುದನ್ನು ಬಿಜೆಪಿ ಹೈಕಮಾಂಡ್ ಅಂತಿಮವಾಗಿ ನಿರ್ಧರಿಸುತ್ತದೆ. 'ನಾನು ಶೀಘ್ರದಲ್ಲೇ ದೆಹಲಿಗೆ (ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು) ಹೋಗುತ್ತೇನೆ ಎಂದು ಬೊಮ್ಮಾಯಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮಲತಾಯಿ’ ಧೋರಣೆಗೆ ಒಳಗಾದ ಜಿಲ್ಲೆಯ ಹಿರಿಯರಿಗೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಗೆ, ‘ರಾಜಕೀಯ ಪರಿಸ್ಥಿತಿಯಿಂದ (ಚಿತ್ರದುರ್ಗಕ್ಕೆ) ಪ್ರಾತಿನಿಧ್ಯ ನೀಡಲು ಸಾಧ್ಯವಾಗಿಲ್ಲ. ಆದರೆ, ಇದು ಮಲತಾಯಿ ಧೋರಣೆಯಲ್ಲ. ಪ್ರಾತಿನಿಧ್ಯ ನೀಡಲು ಪ್ರಯತ್ನಿಸುತ್ತೇನೆ' ಎಂದು ಹೇಳಿದರು.

ಕೆಲವು ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಾಯಕರು (ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮುಂತಾದವರು) ಪಕ್ಷದ ನಾಯಕರನ್ನು ಭೇಟಿಯಾಗಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, 'ಊಹಾತ್ಮಕ ಪ್ರಶ್ನೆಗಳಿಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಎಲ್ಲಾ ಆಕಾಂಕ್ಷಿಗಳು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಅಂತಿಮವಾಗಿ ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ' ಎಂದರು.

ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾದು ನೋಡಿ ಎಂದರು.

ಸಚಿವ ಸಂಪುಟದ ಕಸರತ್ತು ಕುರಿತು ಪಕ್ಷದ ನಾಯಕತ್ವದೊಂದಿಗೆ ಚರ್ಚಿಸಲು ಈ ವಾರ ನವದೆಹಲಿಗೆ ತೆರಳುವುದಾಗಿ ಬೊಮ್ಮಾಯಿ ಮಂಗಳವಾರ ತಿಳಿಸಿದ್ದರು.

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲು ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ನಡೆಯದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮೇಲೆ ಕೆಲ ದಿನಗಳಿಂದ ತೀವ್ರ ಒತ್ತಡವಿತ್ತು.

SCROLL FOR NEXT