ರಾಜ್ಯ

ಅರಣ್ಯಾಧಿಕಾರಿಯನ್ನು ಮಾತೃ ಇಲಾಖೆಗೆ ಕಳುಹಿಸಲು ತುಷಾರ್ ಗಿರಿನಾಥ್ ಸೂಚನೆ

Manjula VN

ಬೆಂಗಳೂರು: ಯಲಹಂಕ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್ ಕೃಷ್ಣ ಅವರನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶುಕ್ರವಾರ ಆದೇಶಿಸಿದ್ದಾರೆ. 

ಗಿರಿನಾಥ್ ಅವರು ಶುಕ್ರವಾರ ಬೆಳಿಗ್ಗೆ ನಗರ ಪ್ರದಕ್ಷಿಣೆ ನಡೆಸಿದ್ದು, ಯಲಹಂಕದಲ್ಲಿ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಆರ್. ಕೃಷ್ಣ ರವರು ರಸ್ತೆ ಬದಿಯ ಮರಗಳ‌ ಕೊಂಬೆಗಳು, ಅಪಾಯ ಸ್ಥಿತಿಯಲ್ಲಿರುವ ಮರ/ಮರದ ಕೊಂಬೆಗಳನ್ನು ತೆಗೆಯಲು ಅಗತ್ಯ ಕ್ರಮ ಕೈಗೊಳ್ಳದೇ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೆ ಅವರನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ಸೂಚನೆ ನೀಡಿದರು.

198 ಕೋಟಿ ವೆಚ್ಚದ ಯಲಹಂಕ-ದೊಡ್ಡಬಳ್ಳಾಪುರ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತಗೊಳಿಸಿ ‘ತುರ್ತು ಪರಿಸ್ಥಿತಿ’ ಅಡಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳುವಂತೆ ಶಾಸಕರು ಆಯುಕ್ತರಿಗೆ ತಿಳಿಸಿದರು. ಈ ಮೇಲ್ಸೇತುವೆ ಯೋಜನೆ ಪೂರ್ಣಗೊಂಡರೆ ಯಲಹಂಕ ಪೊಲೀಸ್ ಠಾಣೆಯಿಂದ ಸಂದೀಪ್ ಉನ್ನಿಕೃಷ್ಣನ್ ಮುಖ್ಯರಸ್ತೆಯವರೆಗಿನ ಮಾರ್ಗವು ಸಿಗ್ನಲ್ ಮುಕ್ತವಾಗಲಿದೆ, ಆದರೆ, ಅರಣ್ಯ ಅಧಿಕಾರಿಗಳಿಂದ ಸಹಕಾರಗಳು ಸಿಗುತ್ತಿಲ್ಲ ಎಂದು ಶಾಸಕ ಎಸ್‌ಆರ್ ವಿಶ್ವನಾಥ್ ಅವರು ದೂರಿದ್ದರು. 

ದೂರು ಹಿನ್ನೆಲೆಯಲ್ಲಿ ಆಯುಕ್ತರು ಎನ್‌ಇಎಸ್ ಬಸ್ ನಿಲ್ದಾಣದಿಂದ 16ಎ ಕ್ರಾಸ್ ಸರ್ವಿಸ್ ರಸ್ತೆ, ಶೇಷಾದ್ರಿಪುರಂ ಕಾಲೇಜು ರಸ್ತೆ, ಶರಾವತಿ ಹೋಟೆಲ್ ರಸ್ತೆ, ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣ, ಸಂದೀಪ್ ಉನ್ನಿಕೃಷ್ಣನ್ ಮುಖ್ಯರಸ್ತೆ ಮತ್ತು ಅತ್ತೂರು ವಾರ್ಡ್‌ವರೆಗಿನ ರಸ್ತೆಗಳನ್ನು ಪರಿಶೀಲನೆ ನಡೆಸಿದರು. 

ಈ ವೇಳೆ ರಸ್ತೆ ಮಧ್ಯೆ ಬಿದ್ದಿರುವ ಮರದ ಕೊಂಬೆಗಳ ರಾಶಿಯನ್ನು ತೆರವುಗೊಳಿಸಿ, ಆವುಗಳನ್ನು ಚೂರು ಚೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಕಟ್ಟಡ ಗುತ್ತಿಗೆದಾರರು ಫುಟ್‌ಪಾತ್‌ಗಳಲ್ಲಿ ನಿರ್ಮಿಸಿರುವ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪಾದಚಾರಿ ಮಾರ್ಗಗಳು, ಶೋಲ್ಡರ್ ಡ್ರೈನ್‌ಗಳು ಮತ್ತು ಒಎಫ್‌ಸಿ ಕೇಬಲ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

SCROLL FOR NEXT