ರಾಜ್ಯ

ಧಾರವಾಡ: ಬೆಣ್ಣಿಹಳ್ಳ ಹೊಳೆಯಲ್ಲಿ ಮತ್ತೊಬ್ಬ ಯುವಕ ಮುಳುಗಿ ಸಾವು

Srinivasamurthy VN

ಧಾರವಾಡ: ಬೆಣ್ಣಿಹಳ್ಳ ಹೊಳೆಯಲ್ಲಿ ಮತ್ತೊಬ್ಬ ಯುವಕ ಮುಳುಗಿ ಸಾವನ್ನಪ್ಪಿದ್ದು, ಇದು ಇತ್ತೀಚೆಗೆ ದಾಖಲಾದ 2ನೇ ಪ್ರಕರಣವಾಗಿದೆ.

ಹೌದು.. ಹುಬ್ಬಳ್ಳಿ ಸಮೀಪದ ಇಂಗಳಹಳ್ಳಿ ಗ್ರಾಮದ ಹೊಳೆಗೆ ಇತ್ತೀಚೆಗೆ ಕೊಚ್ಚಿಕೊಂಡು ಹೋಗಿದ್ದ ನಾಪತ್ತೆಯಾದವರ ಪತ್ತೆಗೆ ಧಾರವಾಡ ಜಿಲ್ಲಾಡಳಿತ ಹರಸಾಹಸ ಪಡುತ್ತಿರುವಂತೆಯೇ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ್ ಗ್ರಾಮದಲ್ಲಿ ಶುಕ್ರವಾರ ಮತ್ತೊಬ್ಬ ಯುವಕ ಅದೇ ಹೊಳೆಗೆ ಬಿದ್ದು ಕೊಚ್ಚಿ ಹೋಗಿದ್ದಾನೆ.

ಶುಕ್ರವಾರ ನವಲಗುಂದ ತಾಲೂಕಿನ ತಡಹಾಳ್ ಗ್ರಾಮದ ಬೆಣ್ಣಿಹಳ್ಳ ಹೊಳೆಯಲ್ಲಿ ಸದಾನಂದ ಪೂಜಾರ್ (22 ವರ್ಷ) ಕೊಚ್ಚಿ ಹೋಗಿದ್ದಾರೆ. ಗ್ರಾಮದ ಬಳಿಯ ಸೇತುವೆಯ ಮೇಲೆ ಯುವಕರು ಹೋಗುತ್ತಿದ್ದಾಗ ಏಕಾಏಕಿ ಹೊಳೆ ನೀರಿನ ಮಟ್ಟ ಏರಿದೆ. ಈ ವೇಳೆ ನೀರಿಗೆ ಸಿಲುಕಿದ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ. ಕೂಡಲೇ ಅಲ್ಲಿದ್ದ ಯುವಕರು ಕೂಡಲೇ ಈಜುವ ಮೂಲಕ ಆತನನ್ನು ರಕ್ಷಿಸಲು ಹರಸಾಹಸ ಪಟ್ಟರಾದರೂ ಯುವಕ ಮುಳುಗಿ ಹೋಗಿದ್ದ ಎಂದು ನವಲಗುಂದ ಪೊಲೀಸರು ತಿಳಿಸಿದ್ದಾರೆ. 

ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದವರು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.29ರಂದು ಬೆಣ್ಣೆಹಳ್ಳ ಹೊಳೆ ಪ್ರವಾಹದಲ್ಲಿ ಇಂಗಳಹಳ್ಳಿಯ ಆನಂದ್ ಹಿರೇಗೌಡರ್ (24 ವರ್ಷ) ಕೊಚ್ಚಿ ಹೋಗಿದ್ದು, ಕಳೆದ ಐದು ದಿನಗಳಿಂದ ಶೋಧ ಕಾರ್ಯ ನಡೆಯುತ್ತಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದವರಿಗೆ ಸುಳಿವು ಸಿಕ್ಕಿಲ್ಲ. ಗ್ರಾಮಸ್ಥರ ನೆರವಿನೊಂದಿಗೆ ಶನಿವಾರವೂ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

SCROLL FOR NEXT