ರಾಜ್ಯ

ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದ ಮಗಳನ್ನು ಹುಡುಕಿಕೊಂಡು ಬಂದ ದೃಷ್ಟಿದೋಷವುಳ್ಳ ತಂದೆಗೆ ಶಾಕ್!

Ramyashree GN

ಚಿತ್ರದುರ್ಗ: ಮಗಳನ್ನು ಹುಡುಕಿಕೊಂಡು ಶನಿವಾರ ಮುರುಘಾ ಮಠಕ್ಕೆ ಆಗಮಿಸಿದ ದೃಷ್ಟಿದೋಷವುಳ್ಳ ತಂದೆಯೊಬ್ಬರು, ಮಗಳು ಸಿಕ್ಕಿಲ್ಲ ಎಂದು ಅಳಲು ಶುರುಮಾಡಿದ ಘಟನೆ ನಡೆದಿದೆ. ಕಾರಣ ಇಷ್ಟೆ, ಗೂಳಯ್ಯನಹಟ್ಟಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಗಳನ್ನು ಸ್ಥಳಾಂತರಿಸಿರುವ ವಿಷಯ ತಿಳಿಯದ ತಂದೆ ಮಗಳನ್ನು ಹುಡುಕಿಕೊಂಡು ಮುರುಘಾ ಮಟಕ್ಕೆ ಬಂದಿದ್ದರು. ಬಾಲಕಿ ಈ ಹಿಂದೆ ಮುರುಘಾ ಮಠದ ಅಕ್ಕಮಹಾದೇವಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು.

ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದ ಮುನಿಸ್ವಾಮಿ ಮತ್ತು ಅವರ ಪತ್ನಿ ಶಂಕರಿಯಮ್ಮ ಅವರು ತಮ್ಮ ಮಗಳನ್ನು ಹುಡುಕಲು ಗೌರಿಬಿದನೂರು ತಾಲೂಕಿನಿಂದ ಚಿತ್ರದುರ್ಗಕ್ಕೆ ಬಂದಿದ್ದರು.

ಆಕೆ ಕಾಣದಿದ್ದಾಗ ಮುನಿಸ್ವಾಮಿ ಮಠದ ಆವರಣದಲ್ಲಿ ಅಳಲು ತೋಡಿಕೊಂಡರು. ತಮ್ಮ ಮಗಳನ್ನು ಪತ್ತೆ ಹಚ್ಚಿ ಒಪ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಸದಸ್ಯರು ಮಧ್ಯಪ್ರವೇಶಿಸಿ ಮುನಿಸ್ವಾಮಿಗೆ ಸಾಂತ್ವನ ಹೇಳಿ, ತಮ್ಮ ಮಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೋಕೇಶ್ ಟಿಎನ್‌ಐಇ ಜೊತೆಗೆ ಮಾತನಾಡಿ, 'ಮುರುಘಾ ಮಠದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ವಾಸವಾಗಿದ್ದ ಮೂವತ್ತೇಳು ಮಕ್ಕಳನ್ನು ರಕ್ಷಿಸಲಾಗಿದ್ದು, ಸದ್ಯಕ್ಕೆ ಜಿಲ್ಲೆಯ ಗೂಳಯ್ಯನಹಟ್ಟಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿದೆ. ಅವರನ್ನು ಆಯಾ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಹಸ್ತಾಂತರಿಸಲಾಗುವುದು, ಅವರು ಮಕ್ಕಳನ್ನು ಜಿಲ್ಲಾ ಶಾಲೆಗಳಲ್ಲಿ ಸೇರಿಸುತ್ತಾರೆ' ಎಂದು ತಿಳಿಸಿದರು.

ಇದೀಗ ಪೋಷಕರು ತಮ್ಮ ಮಗಳನ್ನು ಬೆಂಗಳೂರಿನ ಶಾಲೆಗೆ ಸೇರಿಸುವಂತೆ ಮನವಿ ಮಾಡಿದ್ದು, ಆಕೆಯನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಲೋಕೇಶ್ ತಿಳಿಸಿದ್ದಾರೆ.

SCROLL FOR NEXT