ರಾಜ್ಯ

ಮಳೆ ಬಂದಾಗ ಬೆಂಗಳೂರು ಜಲಾವೃತವಾಗುವುದಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತ ಕಾರಣ: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದು ಕರೆಸಿಕೊಳ್ಳುವ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಒಂದು ದಿನ ವ್ಯಾಪಕವಾಗಿ ಮಳೆ ಬಿದ್ದಾಗ (Bengaluru rain) ಬಹುತೇಕ ಕಡೆಗಳಲ್ಲಿ ನೀರು ತುಂಬಿಕೊಂಡು, ತಗ್ಗು ಪ್ರದೇಶಗಳು ಜಲಾವೃತವಾಗಿ ಹಾನಿ ಉಂಟಾಗುತ್ತದೆ. ಹಲವೆಡೆ ಅನಾಹುತವಾಗುತ್ತವೆ. ಈ ಬಾರಿಯ ಮಳೆಗೆ ಬೆಂಗಳೂರಿನಲ್ಲಿ ಸಾಕಷ್ಟು ತೊಂದರೆಯಾಗಿದೆ.

ಇದಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನಾರಹಿತ ಆಡಳಿತ ಮತ್ತು ದುರಾಡಳಿತವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ಜನವಸತಿಗೆ, ಕಟ್ಟಡ ನಿರ್ಮಾಣಕ್ಕೆ ಕೆರೆ ಮತ್ತು ಬಫರ್ ವಲಯಗಳಲ್ಲಿ ಎಲ್ಲೆಂದರಲ್ಲಿ ಅನುಮತಿ ಕೊಟ್ಟಿರುವುದೇ ಇಂದು ನೀರು ನಿಲ್ಲಲು ದುಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಬೆಂಗಳೂರು ಮಳೆಯ ಸಮಸ್ಯೆಯನ್ನು ಸವಾಲಾಗಿ ತೆಗೆದುಕೊಂಡಿದ್ದೇವೆ. ನಮ್ಮ ಅಧಿಕಾರಿಗಳು, ಎಂಜಿನಿಯರ್‌ಗಳು, ಕಾರ್ಮಿಕರು ಮತ್ತು ಎಸ್‌ಡಿಆರ್‌ಎಫ್ ತಂಡ 24/7 ಕೆಲಸ ಮಾಡುತ್ತಿದೆ. ಸಾಕಷ್ಟು ಒತ್ತುವರಿ ತೆರವು ಮಾಡಿದ್ದು, ಇನ್ನಷ್ಟು ತೆರವಿಗೆ ಮುಂದಾಗಿದ್ದೇವೆ. ಎರಡನೆಯದಾಗಿ, ನಾವು ಟ್ಯಾಂಕ್‌ಗಳಿಗೆ ಸ್ಲೂಸ್ ಗೇಟ್‌ಗಳನ್ನು ಹಾಕುತ್ತಿದ್ದೇವೆ. ಬೆಂಗಳೂರಿನಲ್ಲಿ ನೀರು ಹರಿಸಲು 1500 ಕೋಟಿ ನೀಡಿದ್ದು, ಅತಿಕ್ರಮಣ ತೆರವಿಗೆ 300 ಕೋಟಿ ನೀಡಲಾಗಿದೆ.

ಬೆಂಗಳೂರಿನ ಚರಂಡಿ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ 1500 ಕೋಟಿ ರೂಪಾಯಿ, ಕೆರೆ, ರಾಜಕಾಲುವೆ ಒತ್ತುವರಿ ತೆರವುಗೊಳಿಸಲು 300 ಕೋಟಿ ರೂಪಾಯಿಗಳನ್ನು ನೀಡಿದೆ. ಭವಿಷ್ಯದಲ್ಲಿ ಈ ರೀತಿ ನೀರು ನಿಂತು ಸಮಸ್ಯೆಯಾಗದೆ ಸರಾಗವಾಗಿ ಹರಿದು ಹೋಗುತ್ತದೆ, ಜನರು ತಾಳ್ಮೆಯಿಂದ ನಮ್ಮ ಜೊತೆ ಸಹಕರಿಸಬೇಕು ಎಂದು ಕೇಳಿಕೊಂಡರು. 

ಈ ಮಳೆಯಿಂದ ಇಡೀ ಬೆಂಗಳೂರಿಗೆ ಸಮಸ್ಯೆಯಾಗಿಲ್ಲ. 2 ವಲಯಗಳು, ಮುಖ್ಯವಾಗಿ ಮಹದೇವಪುರದಲ್ಲಿ ಸಮಸ್ಯೆಯಾಗಿದೆ. ಆ ಸಣ್ಣ ಪ್ರದೇಶದಲ್ಲಿ 69 ಟ್ಯಾಂಕ್ ಗಳಿವೆ. ಎಲ್ಲವೂ ತುಂಬಿ ಹರಿಯುತ್ತಿವೆ. ಕಟ್ಟಡ, ಮನೆಗಳು ತಗ್ಗು ಪ್ರದೇಶದಲ್ಲಿವೆ. ಮೂರನೆಯದಾಗಿ ಇಲ್ಲಿ ಅತಿಕ್ರಮಣವಾಗಿದೆ ಹೀಗಾಗಿ ಸಮಸ್ಯೆಯುಂಟಾಗಿದೆ ಎಂದು ಸಿಎಂ ಕಾರಣ ನೀಡಿದರು. 

ಮಂಡ್ಯ ಜಿಲ್ಲೆಯ 2 ನೀರು ಪೂರೈಕೆ ಕೇಂದ್ರಗಳಿಗೆ ಮಳೆ ನೀರು ನುಗ್ಗಿದೆ. 1ನೇ ಪಂಪ್‌ಹೌಸ್‌ನಿಂದ ನೀರು ತಗ್ಗಿದ್ದು ಪೂರೈಕೆ ಆರಂಭವಾಗಲಿದೆ. ಇಂದು ಮಧ್ಯಾಹ್ನದೊಳಗೆ ಇತರೆ ಪಂಪ್‌ಹೌಸ್‌ ತೆರವುಗೊಳಿಸಲಾಗುವುದು. ಟ್ಯಾಂಕರ್ ಮತ್ತು ಬೋರ್‌ವೆಲ್ ಮೂಲಕ ನೀರು ಒದಗಿಸಲಾಗುವುದು ಎಂದು ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಕುರಿತು ಮಾಹಿತಿ ನೀಡಿದರು.

SCROLL FOR NEXT