ರಾಜ್ಯ

ಕೆರೆ ಕೋಡಿ ಬಿದ್ದಿದ್ದರಿಂದ ಕೋಣ ಬಲಿ, ದಲಿತ ವ್ಯಕ್ತಿಯ ತಲೆ ಮೇಲೆ ರುಂಡವನ್ನಿಟ್ಟು ಮೆರವಣಿಗೆ!

Ramyashree GN

ತುಮಕೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಹಲವು ಊರುಗಳಲ್ಲಿ ದಶಕಗಳ ಬಳಿಕ ಕೆರೆಗಳು ತುಂಬಿವೆ. ಇದರಿಂದ ಸಂತೋಷಗೊಂಡಿರುವ ಗ್ರಾಮಸ್ಥರು ಹೊಸ ಹೊಸ ಆಚರಣೆಗಳ ಮೊರೆ ಹೋಗಿದ್ದಾರೆ.

ಶಿರಾ ತಾಲೂಕ್ಕಿನ ಮದಲೂರಿನಲ್ಲಿ ಇಂತದ್ದೊಂದು ಘಟನೆ ನಡೆದಿದ್ದು, ಕೆರೆ ತುಂಬಿದ್ದರಿಂದ ಕೋಣವನ್ನು ಬಲಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕೋಣದ ತಲೆಯನ್ನು ದಲಿತ ವ್ಯಕ್ತಿಯ ತಲೆಯ ಮೇಲಿಟ್ಟು ಊರಿನ ತುಂಬ ಮೆರವಣಿಗೆ ಮಾಡಿರುವುದಾಗಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಮಳೆಯಿಂದಾಗಿ ಅಪರೂಪಕ್ಕೆ ತುಂಬಿರುವ ಕೆರೆಯ ಕೋಡಿಯಿಂದ ಊರಿಗೆ ಯಾವುದೇ ಹಾನಿಯುಂಟಾಗಬಾರದು ಎಂದು ಕೆರೆ ಕೋಡಿ ಬಳಿಯಲ್ಲೇ ಇರುವ ದುರ್ಗಮ್ಮ ದೇವಿಗೆ ಆರು ವರ್ಷದ ಕೋಣವನ್ನು ಬಲಿಕೊಡಲಾಗಿದೆ. ಬಳಿಕ ದಲಿತ ವ್ಯಕ್ತಿಯು ಕೋಣದ ತಲೆಯನ್ನು ತನ್ನ ತಲೆ ಮೇಲಿಟ್ಟುಕೊಂಡು ಕೋಡಿ ಬೀಳುವ ಜಾಗದಲ್ಲಿ ನೀರಿನಲ್ಲಿ ತೇಲಿಬಿಟ್ಟಿದ್ದಾರೆ.

ಕಳೆದ ತಿಂಗಳ ಅಂತ್ಯದಲ್ಲಿ ನಡೆದ ಗೌರಿ ಹಬ್ಬದಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಶಕಗಳಿಂದ ಬರಿದಾಗಿದ್ದ ಮದಲೂರು ಕೆರೆಯು ಈ ಬಾರಿ ಸುರಿದ ಮಳೆಯಿಂದಾಗಿ ಎರಡನೇ ಬಾರಿಗೆ ತುಂಬಿದೆ. ಕೆರೆ ತುಂಬಿದ ಹರ್ಷದಲ್ಲಿ ಗ್ರಾಮಸ್ಥರೆಲ್ಲ ಸೇರಿ ಕೋಣವನ್ನು ಬಲಿ ನೀಡಿದ್ದಾರೆ.

ಹಿಂದಿನ ಚುನಾವಣೆಗಳ ವೇಳೆ ಮದಲೂರು ಕೆರೆಗೆ ನೀರು ತುಂಬಿಸುವುದೇ ರಾಜಕೀಯ ನಾಯಕರ ಪ್ರಮುಖ ಆಶ್ವಾಸನೆ. ಪ್ರತಿ ಬಾರಿ ಚುನಾವಣೆಯ ಸಮಯದಲ್ಲಿ ಮುನ್ನೆಲೆಗೆ ಬರುತ್ತಿದ್ದ ಮದಲೂರು ಕೆರೆ ವಿಚಾರ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ.

SCROLL FOR NEXT