ರಾಜ್ಯ

ಕೊಲ್ಲೂರು: ಸೌಪರ್ಣಿಕಾ ನದಿಯಲ್ಲಿ ಮುಳುಗುತ್ತಿದ್ದ ಮಗನ ರಕ್ಷಣೆಗೆ ತೆರಳಿದ್ದ ತಾಯಿ ನೀರು ಪಾಲು!

Shilpa D

ಉಡುಪಿ: ಕೇರಳದ ತಿರುವನಂತಪುರದಿಂದ ಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲಕ್ಕೆ ಆಗಮಿಸಿದ್ದ ಕುಟುಂಬ ಮಹಿಳೆಯೋರ್ವರು ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ಸಂಭವಿಸಿದೆ.

ನೀರುಪಾಲಾದ ಮಹಿಳೆಯನ್ನು ಕೇರಳದ ತಿರುವನಂತಪುರ ನಿವಾಸಿ ಮುರಗನ್ ಎಂಬವರ ಪತ್ನಿ ಚಾಂದಿ ಶೇಖರನ್ (42) ಎಂದು ಗುರುತಿಸಲಾಗಿದೆ.

ಸೆ. 10 ರಂದು ತಿರುವನಂತಪುರದಿಂದ ಮುರುಗನ್ ಅವರು ಪತ್ನಿ ಚಾಂದಿ ಶೇಖರ್, ಮಗ ಆದಿತ್ಯನ್  ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ್ದು  ವಸತಿ ಗೃಹದಲ್ಲಿ ಉಳಿದುಕೊಂಡಿದ್ದರು. ಶನಿವಾರ ಸಂಜೆ ಎಲ್ಲರೂ ಸೌಪರ್ಣಿಕಾ ಸ್ನಾನ ಘಟ್ಟಕ್ಕೆ ತೆರಳಿದ್ದು ನೀರಿಗಿಳಿದ ಮುರುಗನ್ ನೀರಿನ ಸೆಳೆತಕ್ಕೆ ಸಿಲುಕಿದಾಗ ಪುತ್ರ ಆದಿತ್ಯ ಅವರ ರಕ್ಷಣೆಗೆ ಮುಂದಾಗಿದ್ದಾನೆ.

ಈ ವೇಳೆ ಆದಿತ್ಯ ಕೂಡ ನೀರಿನ ಸೆಳೆತಕ್ಕೆ ಸಿಲುಕಿದ್ದು ಇದನ್ನು ಗಮನಿಸಿದ ಚಾಂದಿ ಶೇಖರ್ ನೀರಿಗೆ ಧುಮುಕಿ ಪತಿ ಹಾಗೂ ಪುತ್ರನ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ಇವರಿಗೆ ಈಜು ಬಾರದ ಕಾರಣ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಇದೇ ವೇಳೆ ಅಲ್ಲಿದ್ದ ಇತರ ಯಾತ್ರಾರ್ಥಿಗಳು ಹಾಗೂ ಸ್ಥಳೀಯರು ಮುರುಗನ್ ಮತ್ತು ಆತನ ಪುತ್ರ ಆದಿತ್ಯನನ್ನು ರಕ್ಷಿಸಿದ್ದಾರೆ.

ನೀರಿನಲ್ಲಿ ಕೊಚ್ಚಿಕೊಂಡು ಹೋದ ಮಹಿಳೆಗಾಗಿ ಅಗ್ನಿ ಶಾಮಕ ದಳ, ಕೊಲ್ಲೂರು ಪೊಲೀಸರು ಹಾಗೂ ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದಾರೆ. ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ನೀರಿಗಿಳಿಯುವುದು ಅಪಕಾಯಕಾರಿ ಎಂದು ಸ್ಥಳೀಯ ವರ್ತಕರು ಎಚ್ಚರಿಕೆ ನೀಡಿದ್ದರೂ ಯಾತ್ರಿಕರು ಅದನ್ನು ಅವಗಣಿಸಿ ಸ್ನಾನಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ.

SCROLL FOR NEXT