ರಾಜ್ಯ

ಗುಣಮಟ್ಟವಿಲ್ಲದ ಮಾರ್ಬಲ್ ಪೂರೈಕೆ: 18.28 ಲಕ್ಷ ರೂ. ಪಾವತಿಸುವಂತೆ ರಾಜಸ್ಥಾನ ಮೂಲದ ಕಂಪನಿಗೆ ಗ್ರಾಹಕ ಆಯೋಗ ನಿರ್ದೇಶನ

Nagaraja AB

ಬೆಂಗಳೂರು: ಕಳಪೆ ಮತ್ತು ಗುಣಮಟ್ಟವಿಲ್ಲದ ಮಾರ್ಬಲ್ ಗಳನ್ನು ಪೂರೈಸಿದ್ದಕ್ಕಾಗಿ ನಗರದ ನಿವಾಸಿಯೊಬ್ಬರಿಗೆ 10. 10 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಒಟ್ಟಾರೇ 18. 28 ಲಕ್ಷ ರೂಪಾಯಿ ಪಾವತಿಸುವಂತೆ ರಾಜಸ್ಥಾನ ಮೂಲದ ಆರ್ ಕೆ ಮಾರ್ಬಲ್ ಪ್ರೈವೇಟ್ ಲಿಮಿಟೆಡ್ ಗೆ (ಆರ್ ಕೆಎಂಪಿಎಲ್ )ಬೆಂಗಳೂರು ಗ್ರಾಮಾಂತರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ ನಿರ್ದೇಶನ ನೀಡಿದೆ. 

ಆರ್‌ಕೆಎಂಪಿಎಲ್‌ನ ಕಡೆಯಿಂದ ಸೇವೆಯ ಕೊರತೆ ಮತ್ತು ಅನ್ಯಾಯದ ವಹಿವಾಟು ಆಗಿರುವುದನ್ನು ಪರಿಗಣಿಸಿದ ಆಯೋಗ ದೂರುದಾರರಾದ ಜ್ಞಾನಜ್ಯೋತಿ ನಗರದ  ಟಿ ಪರಮಶಿವ ಅವರಿಗೆ  8.18 ಲಕ್ಷ ರೂ.ಗಳ ಮೊತ್ತವನ್ನು ಹಿಂದಿರುಗಿಸುವಂತೆ ಸೂಚಿಸಿತು. ಅಲ್ಲದೇ ಮಾರ್ಬಲ್ ಗಳ ಗುಣಮಟ್ಟವನ್ನು ಮೇಲ್ದರ್ಜೇರಿಸಲು ದೂರುದಾರ ವೆಚ್ಚ ಮಾಡಿದ 5 ಲಕ್ಷ ರೂ. ಭರಿಸುವಂತೆಯೂ ಕಂಪನಿಗೆ ಸಲಹೆ ನೀಡಿದೆ. ದೂರುದಾರರಿಗೆ ಪರಿಹಾರವಾಗಿ 5 ಲಕ್ಷ ರೂಪಾಯಿ ಮತ್ತು ವ್ಯಾಜ್ಯ ವೆಚ್ಚ 10,000 ರೂಪಾಯಿ ಪಾವತಿಸಲು ಸೂಚಿಸಿದೆ. 

ದೋಷಪೂರಿತ ಮಾರ್ಬಲ್‌ಗಳನ್ನು ಬದಲಾಯಿಸುವುದಾಗಿ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಆರ್ ಕೆಎಂಪಿಎಲ್ ವಿಫಲವಾಗಿದೆ ಅಥವಾ ಪಾವತಿಸಿದ ಹಣವನ್ನು ಹಿಂದಿರುಗಿಸಿಲ್ಲ ಎಂದು  ಅಧ್ಯಕ್ಷೆ ಎಂ.ಶೋಭಾ ಮತ್ತು ಸದಸ್ಯರಾದ ಬಿ.ದೇವರಾಜು ಮತ್ತು ವಿ.ಅನುರಾಧ ಅವರನ್ನೊಳಗೊಂಡ ಆಯೋಗ ಹೇಳಿತು. ದೂರುದಾರರು ಖುದ್ದಾಗಿ ರಾಜಸ್ಥಾನದ ಕಿಶನ್‌ಗಂಜ್‌ಗೆ ಭೇಟಿ ನೀಡಿದಾಗ ಉತ್ತಮ ಗುಣಮಟ್ಟದ ಮಾರ್ಬಲ್‌ಗಳನ್ನು ತೋರಿಸಿದ್ದಾರೆ ಆದರೆ ಅವರು ಕಳಪೆ ಗುಣಮಟ್ಟದ ಮಾರ್ಬಲ್  ಪೂರೈಸುವ ಮೂಲಕ ಮೋಸ ಮಾಡಲಾಗಿದೆ ಎಂದು ಆಯೋಗ ಹೇಳಿತು.

SCROLL FOR NEXT