ರಾಜ್ಯ

ಪ್ರಶ್ನೋತ್ತರ ಅವಧಿಯಲ್ಲಿ ಸಚಿವರು ಸದನದಲ್ಲಿ ಇಲ್ಲದಿದ್ದರೆ ಹೇಗೆ?: ವಿಪಕ್ಷ ನಾಯಕರ ಅಸಮಾಧಾನ; ಆರೋಗ್ಯ ಸಚಿವರು ಆಸ್ಪತ್ರೆ ಸೇರಿದ್ದಾರೆ ಎಂದ ಸ್ಪೀಕರ್

Sumana Upadhyaya

ಬೆಂಗಳೂರು: ಅಧಿವೇಶನ ಕಲಾಪ ವೇಳೆ ಆಡಳಿತ ಪಕ್ಷ, ಪ್ರತಿಪಕ್ಷಗಳ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕೆಂಬ ನಿಯಮವಿದ್ದರೂ ಸರಿಯಾಗಿ ಕಲಾಪ ವೇಳೆ ಉಪಸ್ಥಿತರಿದ್ದು ಸಕ್ರಿಯವಾಗಿ ಭಾಗವಹಿಸುವ ಸದಸ್ಯರು ವಿರಳ. ಇನ್ನು ಕಲಾಪದಲ್ಲಿ ಗಂಭೀರ, ಆಗಬೇಕಾದ ಚರ್ಚೆಯ ವಿಷಯಗಳು ನಡೆಯುವುದು ಕೂಡ ಕಡಿಮೆಯೇ.

ಇಂದು ರಾಜ್ಯ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಆರೋಗ್ಯ ಸಚಿವ ಡಾ ಸುಧಾಕರ್ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಗೈರಾಗಿದ್ದರು. ಇದಕ್ಕೆ ಪ್ರತಿಪಕ್ಷ ನಾಯಕರಾದ ಕೃಷ್ಣ ಭೈರೇಗೌಡ ಮತ್ತು ಯು ಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು. 

ಕೃಷ್ಣ ಬೈರೇಗೌಡ ಮಾತನಾಡಿ, ಪ್ರಶ್ನೆಗೆ ಉತ್ತರ ನೀಡಲು ತಯಾರಿ ಆಗಬೇಕು. ತಯಾರಿ ಆಗಲು ಬಂದಿಲ್ಲ ಎಂದರೆ ಉತ್ತರ ಹೇಗೆ ಕೊಡುತ್ತಾರೆ, ಬರೀ ಅಂಗೈಯಲ್ಲಿ ನಕ್ಷತ್ರ ತೋರಿಸುವುದು ಎಂದು ಕೃಷ್ಣ ಬೈರೇಗೌಡ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಸ್ಪೀಕರ್ ಕಾಗೇರಿ, ಅನಾರೋಗ್ಯದಿಂದ ಆರೋಗ್ಯ ಸಚಿವರು ಆಸ್ಪತ್ರೆ ಸೇರಿದ್ದಾರೆ. ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ಬೇರೆಯವರು ಉತ್ತರ ಕೊಡುತ್ತಾರೆ ಎಂದರು. ಆರೋಗ್ಯ ಸಚಿವರಿಗೆ ಅನಾರೋಗ್ಯ ಇದೆ ಅದರ ಬಗ್ಗೆ ಆಕ್ಷೇಪ ಇಲ್ಲ. ನಾಮಕಾವಸ್ತೆ ಉತ್ತರ ಬೇಡ, ಸಚಿವರಿದ್ದಾಗ ಉತ್ತರ ಕೊಡಲಿ ಎಂದರು.

ಅದಕ್ಕೆ ದನಿಗೂಡಿಸಿದ ಕಾಂಗ್ರೆಸ್ ಶಾಸಕ ಯು.ಟಿ ಖಾದರ್  ನಮಗೂ ಸರ್ಕಾರ ನಡೆಸಿ ಗೊತ್ತಿದೆ, ಸದನಕ್ಕೆ ಕೆಲವೊಮ್ಮೆ ಬರಲು ಸಾಧ್ಯವಾಗದಿದ್ದಾಗ ಬೇರೆಯವರಿಂದ ಉತ್ತರ ಕೊಡಿಸಬೇಕು ಎಂದರು, ಇಲ್ಲಿ ಯಾರಿಗೂ ಆಸಕ್ತಿ ಇಲ್ಲ ಎಂದರು.

ಈ ವೇಳೆ ಸಚಿವ ಸಿ.ಸಿ ಪಾಟೀಲ್, ಸೋಮವಾರ ಪ್ರಶ್ನೆಗೆ ಉತ್ತರ ಕೊಡಿಸುತ್ತೇವೆ ಎಂದರು. ಈ ವೇಳೆಗೆ ಸಚಿವ ಅಶ್ವಥ ನಾರಾಯಣ ಸದನಕ್ಕೆ ಎಂಟ್ರಿಯಾದರು. ಆಗ ಸ್ಪೀಕರ್ ತರಾಟೆಗೆ ತೆಗೆದುಕೊಂಡು, ಸದನದಲ್ಲಿ ಪ್ರಶ್ನೋತ್ತರಕ್ಕೆ ಮೊದಲ ಆದ್ಯತೆ ನೀಡಬೇಕು, ಸದನಕ್ಕೆ ಬರಲು ತಡ ಆಗಬಾರದು ಎಂದರು.

SCROLL FOR NEXT