ರಾಜ್ಯ

ಸ್ಮಶಾನ ಕಾರ್ಮಿಕರಿಗೆ ಖಾಯಂ ಸಮಾನ ವೇತನ: ಕೋಟಾ ಶ್ರೀನಿವಾಸ ಪೂಜಾರಿ

Nagaraja AB

ಬೆಂಗಳೂರು: ರಾಜ್ಯದ ವಿವಿಧ ಸ್ಮಶಾನಗಳಲ್ಲಿ ಬಹು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಖಾಯಂ ಸಮಾನ ವೇತನ ನೀಡುವ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿಂದು ಸ್ಮಶಾನ ಕಾರ್ಮಿಕರೊಂದಿಗೆ ಸಭೆ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಸಚಿವರು, ಸ್ಮಶಾನ ಕಾರ್ಮಿಕರು ಸ್ಮಶಾನಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಕಾರ್ಮಿಕ ವರ್ಗವಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 200 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೇವಲ ಇಬ್ಬರು ಮಾತ್ರ ಖಾಯಂ ಸಿಬ್ಬಂದಿಯಾಗಿದ್ದಾರೆ. ಉಳಿದ 148 ಸಿಬ್ಬಂದಿ ನೇರ ವೇತನ ಪಡೆಯುತ್ತಿದ್ದು, ಅವರನ್ನು  ಖಾಯಂ ಗೊಳಿಸುವ ಅಥವಾ ಖಾಯಂ ಹುದ್ದೆಯ ಸಮಾನ ವೇತನ ನೀಡುವ ಬಗ್ಗೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಮಹಾನಗರ ಪಾಲಿಕೆಗಳು, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯಿತಿಗಳಲ್ಲಿನ ಸ್ಮಶಾನಗಳಲ್ಲಿ ಕೆಲಸ ನಿರ್ವಹಿಸುವವರ ಮಾಹಿತಿಯನ್ನು ಕ್ರೋಢೀಕರಿಸಿ ಅವರ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸುವ ಸಂಬಂಧ ಪ್ರಸ್ತಾಪನೆ ಸಿದ್ದಪಡಿಸಬೇಕು, ಈ ಸಂಬಂಧ ಶೀಘ್ರವೇ ಉನ್ನತ ಅಧಿಕಾರಿಗಳ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. 

ಸ್ಮಶಾನ ಕಾರ್ಮಿಕರಿಗೆ ವಸತಿ ಯೋಜನೆ, ಅವರ ಮಕ್ಕಳಿಗೆ ರಾಜ್ಯದ ಪ್ರತಿಷ್ಠಿತ ಶಾಲೆಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವ ಮತ್ತು ಪಡಿತರ ವಿತರಣೆ ಸಂಬಂಧ ಯೋಜನೆ ರೂಪಿಸುವ ಸಂಬಂಧ ಚರ್ಚೆಯಲ್ಲಿ ಚರ್ಚಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್, ಆಯುಕ್ತ ಡಾ. ಕೆ. ರಾಕೇಶ್ ಕುಮಾರ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.

SCROLL FOR NEXT