ರಾಜ್ಯ

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಫಲಶ್ರುತಿ: ಪ್ರವಾಹ ಪೀಡಿತ ವಿದ್ಯಾರ್ಥಿಗಳ ಅಕ್ಷರಾಭ್ಯಾಸಕ್ಕೆ ಸಮೀಪದ ಶಾಲೆಯಲ್ಲಿ ವ್ಯವಸ್ಥೆ!

Ramyashree GN

ಬೆಂಗಳೂರು: ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಹಾಗೂ ಇತರ ಅಧಿಕಾರಿಗಳು ಸೋಮವಾರ ಚನ್ನಪಟ್ಟಣ ಪಟ್ಟಣದ ತಟ್ಟೆಕೆರೆಯಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲಾ ಆವರಣದಲ್ಲಿರುವ ನೀರು ಹೊರಹಾಕಲು ಕ್ರಮ ಕೈಗೊಂಡಿದ್ದಾರೆ.

ಸೋಮವಾರ, TNIE ಮತ್ತು kannadaprabha.com, ಅಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ದುಃಸ್ಥಿತಿಯನ್ನು ತನ್ನ ವರದಿ ಮೂಲಕ ಸರ್ಕಾರದ ಗಮನ ಸೆಳೆದಿತ್ತು. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹತ್ತಿರದ ದೇವಸ್ಥಾನದಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದು 'ಮುಳುಗಿದ ಶಾಲೆ, ದೇವಸ್ಥಾನದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು' ಎಂಬ ಶೀರ್ಷಿಕೆ ನೀಡಿ ವರದಿ ಮಾಡಿತ್ತು.

ಈ ಕುರಿತು ಟಿಎನ್‌ಐಇ ವರದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ್ ಟ್ವೀಟ್ ಮಾಡಿ, 'ರಾಮನಗರ ಜಿಲ್ಲಾ ಪಂಚಾಯತಿಯ ಸಿಇಒ ಮತ್ತು ರಾಮನಗರದ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಮೀಪದ ಶಾಲೆಗೆ ತಾತ್ಕಾಲಿಕ ಸ್ಥಳಾಂತರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶಾಲೆಯಲ್ಲಿ ತುಂಬಿದ್ದ ನೀರನ್ನು ಹೊರತೆಗೆಯಲಾಗುತ್ತಿದೆ. ಶಾಲೆಗೆ ಹೊಸ ಮತ್ತು ಸುರಕ್ಷಿತ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ' ಎಂದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಶಾಲೆಯಲ್ಲಿನ ನೀರು ಕಡಿಮೆಯಾಗಿದ್ದು, ಮಂಗಳವಾರ ಸಿಬ್ಬಂದಿ ಬರಲಿದ್ದಾರೆ. ನೀರು ತುಂಬಿ ಉಂಟಾಗುವ ಬವಣೆ ತಪ್ಪಿಸಲು ಆವರಣದ ಎತ್ತರವನ್ನು ಹೆಚ್ಚಿಸಲಾಗುವುದು. ಮುಂದಿನ ಐದು ದಿನಗಳ ಕಾಲ ಸಮೀಪದ ಶಾಲೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ದಸರಾ ರಜೆಯಲ್ಲಿ ಹಳೆ ಶಾಲೆಯನ್ನು ದುರಸ್ತಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

SCROLL FOR NEXT