ಸಂಗ್ರಹ ಚಿತ್ರ 
ರಾಜ್ಯ

ನಾಡಗೀತೆ ಹಾಡಲು ಧಾಟಿ ಹಾಗೂ ಕಾಲಮಿತಿ ನಿಗದಿಪಡಿಸಿದ ರಾಜ್ಯ ಸರ್ಕಾರ!

ಕರ್ನಾಟಕ ನಾಡಗೀತೆಗೆ ರಾಜ್ಯ ಸರ್ಕಾರ ಧಾಟಿ ಹಾಗೂ ಕಾಲಮಿತಿ ನಿಗದಿಪಡಿಸಿದ್ದು, ಆ ಮೂಲಕ ನಾಡಗೀತೆ ಕುರಿತು ಭುಗಿಲೆದ್ದಿದ್ದ ವಿವಾದಕ್ಕೆ ಸರ್ಕಾರ ತೆರೆ ಎಳೆದಿದೆ.

ಬೆಂಗಳೂರು: ಕರ್ನಾಟಕ ನಾಡಗೀತೆಗೆ ರಾಜ್ಯ ಸರ್ಕಾರ ಧಾಟಿ ಹಾಗೂ ಕಾಲಮಿತಿ ನಿಗದಿಪಡಿಸಿದ್ದು, ಆ ಮೂಲಕ ನಾಡಗೀತೆ ಕುರಿತು ಭುಗಿಲೆದ್ದಿದ್ದ ವಿವಾದಕ್ಕೆ ಸರ್ಕಾರ ತೆರೆ ಎಳೆದಿದೆ.

ಖ್ಯಾತ ರಾಗ ಸಂಯೋಜಕ, ಗಾಯಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ಕುವೆಂಪು ವಿರಚಿತ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ಈಗ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ್ದು, ಇದಕ್ಕಾಗಿ ಕಾಲಮಿತಿಯನ್ನೂ ನಿಗದಿ ಪಡಿಸಿದೆ. 

ಅಂತೆಯೇ ಯಾವುದೇ ಆಲಾಪ ಹಾಗೂ ಪುನರಾವರ್ತನೆ ಇಲ್ಲದಂತೆ ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಲ್ಲಿ ನಾಡಗೀತೆಯನ್ನು ಹಾಡಲು ಸಾಧ್ಯ ಎಂದು ತಜ್ಞರು ನೀಡಿದ ವರದಿ ಆಧರಿಸಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ.

ಹೀಗಾಗಿ ಇನ್ನು ಮುಂದೆ ರಾಷ್ಟ್ರಕವಿ ಕುವೆಂಪು ರಚಿಸಿರುವ "ಜಯಭಾರತ ಜನನಿಯ ತನುಜಾತೆ" ಕವನವು ನಾಡಗೀತೆಯಾಗಿ ಅಂಗೀಕೃತಗೊಂಡ ರೂಪದಲ್ಲೇ ಹಿಂದಿನ ಒಂದಕ್ಷರವನ್ನೂ ಬಿಡದಂತೆ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿದ ಧಾಟಿಯಲ್ಲೇ ಹಾಡಲಾಗುತ್ತದೆ ಎಂದು ಕನ್ನಡ - ಇಂಧನ ಮತ್ತು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ದಶಕಗಳಿಂದ ಇದ್ದ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರದ ದಿಟ್ಟ ನಡೆಗೆ ನಾಡಿನ ಸಾಂಸ್ಕೃತಿಕ ವಲಯದಿಂದ ಈಗ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. 

ಏನಿದು ವಿವಾದ
ನಾಡಗೀತೆಗೆ ಧಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ವಿಚಾರ 2005 ರಿಂದಲೂ ನನೆಗುದಿಗೆ ಬಿದ್ದಿತ್ತು ‌.  ಕೆಲವು ಕಾರ್ಯಕ್ರಮಗಳಲ್ಲಿ ಏಳರಿಂದ ಎಂಟು ನಿಮಿಷಗಳ ಕಾಲ ನಾಡಗೀತೆ ಹಾಡುತ್ತಿದ್ದರು. ಇದು ಅಶಕ್ತರು, ಅಂಗವಿಕಲರಿಗೆ ಅನನುಕೂಲವಾಗುತ್ತಿತ್ತು. ಹೀಗಾಗಿ ಧಾಟಿ ಹಾಗೂ ಕಾಲಮಿತಿಯ ಬಗ್ಗೆ ಸ್ಪಷ್ಟತೆ ತರಬೇಕೆಂಬ ಒತ್ತಾಯ ಸರಕಾರದ ಮುಂದೆ ಇತ್ತು. 2006 ರಲ್ಲಿ ಸಾಹಿತಿ ವಸಂತ ಕನಕಾಪುರೆ ನೇತೃತ್ವದಲ್ಲಿ ಸರಕಾರ ಒಂದು ಸಮಿತಿ ರಚಿಸಿತ್ತು. ಆದರೆ ಅವರ ಅಕಾಲಿಕ ಮರಣ ಹಿನ್ನೆಲೆಯಲ್ಲಿ ಚನ್ನವೀರ ಕಣವಿ ಅಧ್ಯಕ್ಷತೆಯಲ್ಲಿ ಸರಕಾರ ಮತ್ತೊಂದು ಸಮಿತಿ ರಚನೆ ಮಾಡಿತ್ತು. ಆದರೆ ಈ ಸಮಿತಿಯ ಸದಸ್ಯರಲ್ಲೇ ಸ್ಪಷ್ಟತೆ ಇರಲಿಲ್ಲ.

ಈ ಹಿನ್ನೆಲೆಯಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವಿ ಸುನಿಲ್‌ ಕುಮಾರ್ ನಾಡಗೀತೆಗೆ ಧಾಟಿ ಹಾಗೂ ಕಾಲಮಿತಿ ನಿಗದಿ ಮಾಡುವಂತೆ ಹಿರಿಯ ಸಂಗೀತ ವಿದೂಷಿ ಎಸ್.ಆರ್.ಲೀಲಾವತಿ ಅಧ್ಯಕ್ಷತೆಯಲ್ಲಿ ಹದಿನೆಂಟು ಜನರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಲ್ಲಿ ನಾಡಗೀತೆ ಹಾಡಬೇಕೆಂದು ನೀಡಿದ್ದ ಶಿಫಾರಸು ಇದೀಗ ಅಧಿಕೃತಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT