ರಾಜ್ಯ

ರಾಜ್ಯದ ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಮಹಾರಾಷ್ಟ್ರ ಮಾದರಿ ಅಳವಡಿಸಿಕೊಳ್ಳುವ ಸಾಧ್ಯತೆ

Ramyashree GN

ಶಿವಮೊಗ್ಗ: ಸರ್ಕಾರ ಸದ್ಯ ನಿರ್ಮಿಸುತ್ತಿರುವ ಮತ್ತು ಭವಿಷ್ಯದಲ್ಲಿ ನಿರ್ಮಿಸಲಿರುವ ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಮಹಾರಾಷ್ಟ್ರದ ಮಾದರಿಯನ್ನು ಪುನರಾವರ್ತಿಸಲು ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಚಿಂತನೆ ನಡೆಸಿದೆ.

ತಾನು ನಿರ್ಮಿಸಿದ ವಿಮಾನ ನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (ಎಎಐ) ಹಸ್ತಾಂತರಿಸುವ ಬದಲು ಸರ್ಕಾರವೇ ಅಂತಹ ವಿಮಾನ ನಿಲ್ದಾಣಗಳನ್ನು ನಿರ್ವಹಿಸಿ ಅವುಗಳಿಂದ ಆದಾಯ ಗಳಿಸುವ ಸಾಧ್ಯತೆಯಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜನವರಿಯಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿರುವ ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯ ಸರ್ಕಾರದ ನಿರ್ವಹಣೆ ಮತ್ತು ಕಾರ್ಯಾಚರಣೆಯ ಮೊದಲ ವಿಮಾನ ನಿಲ್ದಾಣ ಎನಿಸಿಕೊಳ್ಳಲಿದೆ.

ಮಹಾರಾಷ್ಟ್ರ ಸರ್ಕಾರವು ನಿರ್ಮಿಸಿದ ಆರರಿಂದ ಏಳು ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಮತ್ತು ಕಾರ್ಯಾಚರಿಸಲು ಪ್ರಾಧಿಕಾರವನ್ನು ರಚಿಸಿದೆ. 'ನಾವು ಅದೇ ಮಾದರಿಯನ್ನು ಪುನರಾವರ್ತಿಸಲು ಯೋಚಿಸುತ್ತಿದ್ದೇವೆ. ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯ ಸರ್ಕಾರವು ನೇರವಾಗಿ ನಿರ್ವಹಿಸುತ್ತಿರುವ ಮೊದಲ ವಿಮಾನ ನಿಲ್ದಾಣವಾಗಿದೆ. ರಾಜ್ಯ ಸರ್ಕಾರ ಒಟ್ಟು ನಿರ್ಮಾಣ ವೆಚ್ಚದ ಶೇ.90ರಷ್ಟನ್ನು ಹೂಡಿಕೆ ಮಾಡಿದೆ. ಹೀಗಾಗಿ, ವಿಮಾನ ನಿಲ್ದಾಣಗಳಿಂದ ಬರುವ ಆದಾಯವನ್ನು ಬಳಸಿಕೊಳ್ಳಲು ಸರ್ಕಾರ ಬಯಸುತ್ತದೆ' ಎಂದು ಸಂಸದ ಬಿ.ವೈ. ರಾಘವೇಂದ್ರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

'ಮಹಾರಾಷ್ಟ್ರ ಸರ್ಕಾರ ತನ್ನ ವಿಮಾನ ನಿಲ್ದಾಣಗಳನ್ನು ಹೇಗೆ ನಿರ್ವಹಿಸುತ್ತಿದೆ ಮತ್ತು ಕಾರ್ಯಾಚರಿಸುತ್ತಿದೆ ಎಂಬುದನ್ನು ಎಂಬುದನ್ನು ಅಧ್ಯಯನ ಮಾಡಲು ರಾಜ್ಯದ ಅಧಿಕಾರಿಗಳ ತಂಡ ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದೆ. ಶಿರಡಿ ವಿಮಾನ ನಿಲ್ದಾಣ ಸೇರಿದಂತೆ ಇತರೆ ವಿಮಾನ ನಿಲ್ದಾಣಗಳಿಗೂ ತಂಡ ಭೇಟಿ ನೀಡಲಿದೆ. ಅಲ್ಲಿನ ಮಾದರಿಯನ್ನು ಅಧ್ಯಯನ ಮಾಡಿದ ನಂತರ, ವಿಮಾನ ನಿಲ್ದಾಣವನ್ನು ಎಎಐಗೆ ಹಸ್ತಾಂತರಿಸಬೇಕೇ ಅಥವಾ ಮೂಲಸೌಕರ್ಯ ಇಲಾಖೆಯಿಂದ ನಿರ್ವಹಿಸಬೇಕೇ ಅಥವಾ ಅದನ್ನು ಖಾಸಗೀಕರಣಗೊಳಿಸಬೇಕೇ ಎಂಬ ಬಗ್ಗೆ ರಾಜ್ಯ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ' ಎಂದು ಅವರು ಹೇಳಿದರು.

ಮಹಾರಾಷ್ಟ್ರ ಸರ್ಕಾರವು 2002 ರಲ್ಲಿ ರಾಜ್ಯದಲ್ಲಿ ವಿಮಾನ ನಿಲ್ದಾಣಗಳನ್ನು ಯೋಜಿಸಲು, ನಿರ್ಮಿಸಲು, ನಿರ್ವಹಿಸಲು ಮತ್ತು ಕಾರ್ಯಾಚರಿಸಲು ಮಹಾರಾಷ್ಟ್ರ ಏರ್‌ಪೋರ್ಟ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್ (MADC) ಅನ್ನು ಸ್ಥಾಪಿಸಿತು.

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅಂದಾಜು 384 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದು 3,200 ಮೀಟರ್‌ಗಳ ರನ್‌ವೇಯನ್ನು ಹೊಂದಿದೆ. ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದಲ್ಲಿನ ಎರಡನೇ ಅತಿ ಉದ್ದದ ರನ್ ವೇ ಇದಾಗಲಿದೆ. ಉಡಾನ್ ಯೋಜನೆಯಡಿ ಶಿವಮೊಗ್ಗದಿಂದ ಬೆಂಗಳೂರು, ಮುಂಬೈ, ಚೆನ್ನೈ, ಮಂಗಳೂರು, ತಿರುಪತಿ, ಹೈದರಾಬಾದ್, ಕೊಚ್ಚಿ, ದೆಹಲಿ ಮತ್ತು ಗೋವಾಕ್ಕೆ ವಿಮಾನ ಹಾರಾಟ ನಡೆಸಲು ಸಂಸದ ಬಿ.ವೈ. ರಾಘವೇಂದ್ರ ಅವರು ಈಗಾಗಲೇ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

SCROLL FOR NEXT