ರಾಜ್ಯ

'ದೀಪಕ್ ಇನ್ನು ಜೀವಂತ': ಸತ್ತ ಮೇಲೂ ಜೀವಿಸಲು ಸಾಧ್ಯವಾಗಿಸುವ ಅಂಗಾಂಗ ದಾನ ಅತ್ಯಂತ ಶ್ರೇಷ್ಠ!

Srinivasamurthy VN

ಬೆಂಗಳೂರು: ದೀಪಕ್ ಇನ್ನು ಜೀವಂತವಾಗಿದ್ದು, ಸತ್ತ ಮೇಲೂ ಜೀವಿಸಲು ಸಾಧ್ಯವಾಗಿಸುವ ಅಂಗಾಂಗ ದಾನ ಅತ್ಯಂತ ಶ್ರೇಷ್ಠವಾದುದು ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ.

ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತುಮಕೂರು ಮೂಲದ 26 ವರ್ಷ ವಯಸ್ಸಿನ ಎಸ್.ದೀಪಕ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಪೋಷಕರು ಮಗನ ಅಂಗಾಂಗ ದಾನ ಮಾಡಿದ್ದಾರೆ. ಪೋಷಕರ ಈ ನಿರ್ಧಾರಕ್ಕೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ವಂದನೆ ಸಲ್ಲಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌, ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಎಸ್.ದೀಪಕ್ ಹಾಗೂ ಅವರ ಪೋಷಕರಿಗೆ ಅನಂತ ವಂದನೆಗಳು. ದೀಪಕ್ ಅವರ ದೇಹದಿಂದ ಯಕೃತ್ತು, ಕಿಡ್ನಿ, ಹೃದಯದ ಕವಾಟ, ಕಾರ್ನಿಯಾ ಹಾಗೂ ಚರ್ಮವನ್ನು ಕಸಿ ಮಾಡಲಾಗಿದ್ದು, ಅನೇಕರಿಗೆ ಜೀವದಾನ ನೀಡಲಿದೆ ಎಂದು ಹೇಳಿದ್ದಾರೆ.

ಸತ್ತ ಮೇಲೂ ಜೀವಿಸಲು ಸಾಧ್ಯವಾಗಿಸುವ ಅಂಗಾಂಗ ದಾನ ಅತ್ಯಂತ ಶ್ರೇಷ್ಠವಾದುದು. ನಾನು ಈಗಾಗಲೇ ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದೇನೆ. ನೀವು ಕೂಡ ಅಂಗಾಂಗ ದಾನ ಮಾಡಲು ಮುಂದಾಗಿ ಎಂದು ಅವರು ಮನವಿ ಮಾಡಿದ್ದಾರೆ.

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದೀಪಕ್
ಬೆಂಗಳೂರು ಗ್ರಾಮಾಂತರ ಗಂಗೊಂಡನಹಳ್ಳಿಯ ದೀಪಕ್ ಸೆ.25 ರಂದು ನೈಸ್ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ನಿಂತಿದ್ದ ಕ್ಯಾಂಟರ್ ಗೆ ದೀಪಕ್ ಅವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದೀಪಕ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ದೀಪಕ್ ಅವರ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ. ಕಿಡ್ನಿ, ಕಣ್ಣು, ಚರ್ಮ ಸೇರಿದಂತೆ ದೇಹದ ಇತರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಪೋಷಕರ ಈ ನಿರ್ಧಾರಕ್ಕೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಮೆಚ್ಚುಗೆ ಸೂಚಿಸಿದ್ದಾರೆ.

2ನೇ ಘಟನೆ
ಇತ್ತೀಚೆಗೆ ಅಂದರೆ ಸೆಪ್ಟಂಬರ್‌ 21 ರಂದು ಚಿಕ್ಕಮಗಳೂರಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. ಬಸ್‌ನಿಂದ ಕೆಳಗೆ ಬಿದ್ದು ಮಿದುಳು ನಿಷ್ಕ್ರಿಯಗೊಂಡಿದ್ದ ಮಗಳ ಅಂಗಾಂಗ ದಾನವನ್ನು ಪೋಷಕರು ಮಾಡಿದ್ದರು. ಚಿಕ್ಕಮಗಳೂರಿನ ಸೋಮನಹಳ್ಳಿಯ ತಾಂಡ್ಯದ ಯುವತಿ ರಕ್ಷಿತಾ ಬಸ್‌ನಿಂದ ಕೆಳಗೆ ಬಿದ್ದಿದ್ದ ಪರಿಣಾಮ ಮಿದುಳು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು.ರಕ್ಷಿತಾ ಅವರ ತಾಯಿ ಲಕ್ಷ್ಮಿ ಬಾಯಿ, ತಂದೆ ಸುರೇಶ್ ನಾಯಕ್ ಮಗಳ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದರು. 2 ಹೆಲಿಕ್ಯಾಪ್ಟರ್‌ಗಳ ಮೂಲಕ ಅಂಗಾಂಗ ರವಾನೆ ಮಾಡಲಾಗಿತ್ತು.

SCROLL FOR NEXT