ರಾಜ್ಯ

ಬಾಗಲಕೋಟೆಯ 'ಲವ್ ಜಿಹಾದ್' ಕೇಸು ನಕಲಿ, ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದ ಸಂಗತಿ

Sumana Upadhyaya

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ವರದಿಯಾಗಿರುವ ಲವ್-ಜಿಹಾದ್ ಪ್ರಕರಣದ ಪೊಲೀಸ್ ತನಿಖೆಯಿಂದ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. 

26 ವರ್ಷದ ಅಫ್ಜಲ್ ಸೊಲ್ಲಾಪುರ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದು, 22 ವರ್ಷದ ನೇತ್ರಾವತಿ ವಡ್ಡರ್ ಎಂಬ ಯುವತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಫೆಬ್ರವರಿ 27 ರಂದು ಇಳಕಲ್ ತಾಲೂಕಿನ ಗುಡೂರು ಗ್ರಾಮದಲ್ಲಿ ಅಫ್ಜಲ್ ಮತ್ತು ನೇತ್ರಾವತಿ ಬೆಂಕಿ ಹಚ್ಚಿಕೊಂಡಿದ್ದರು. ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅಫ್ಜಲ್ ಮತ್ತು ನೇತ್ರಾ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS) ಗೆ ಕಳುಹಿಸಲಾಗಿದೆ. 

ಶೇಕಡಾ 70ರಷ್ಟು ಗಾಯಗೊಂಡಿದ್ದ ಅಫ್ಜಲ್ ಸೋಮವಾರ ಮೃತಪಟ್ಟಿದ್ದಾರೆ. ತೀವ್ರ ಸುಟ್ಟ ಗಾಯಗಳೊಂದಿಗೆ ಯುವತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಹಿಂದೂ ಸಂಘಟನೆಗಳು ಇದನ್ನು 'ಲವ್-ಜಿಹಾದ್' ಎಂದು ಹೇಳಿಕೊಂಡಿದ್ದು, ತನ್ನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಹುಡುಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಿದ್ದರು. ಅಫ್ಜಲ್ ನನ್ನು ತಮ್ಮ ಮಗಳು ಪ್ರೀತಿಸಲಿಲ್ಲ, ಅಫ್ಜಲ್ ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎಂದು ಹುಡುಗಿಯ ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದು, ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ, ಪೊಲೀಸ್ ತನಿಖೆಯಲ್ಲಿ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದ್ದು, ನೇತ್ರಾವತಿ ಅಫ್ಜಲ್ ಬಗ್ಗೆ ತನ್ನ ಮನೆಯವರಿಗೆ ತಿಳಿಸಿರಲಿಲ್ಲ. ಆಕೆಯ ಮನೆಯವರು ಮದುವೆ ನಿಶ್ಚಯಿಸಲು ಸಹ ಒಪ್ಪಿಕೊಂಡರು ಎಂದು ಹೇಳಲಾಗುತ್ತಿದೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.

SCROLL FOR NEXT