ರಾಜ್ಯ

ಮ್ಯೂಸಿಕ್ ಸೌಂಡ್ ಕಡಿಮೆ ಮಾಡುವಂತೆ ಹೇಳಿದ ಸೇನಾಧಿಕಾರಿ ಸೋದರನ ಮೇಲೆ ಹಲ್ಲೆ, ತೀವ್ರ ಗಾಯಗೊಂಡು ಸಾವು: ಬೆಂಗಳೂರಿನಲ್ಲೊಂದು ಅಮಾನುಷ ಕೃತ್ಯ

Sumana Upadhyaya

ಬೆಂಗಳೂರು: ಪಕ್ಕದ ಮನೆಯಲ್ಲಿ ಡಿಜೆ ಮ್ಯೂಸಿಕ್ ನ ಸೌಂಡನ್ನು ಕಡಿಮೆ ಮಾಡುವಂತೆ ಹೇಳಿದ್ದಕ್ಕೆ ಅಪರಿಚಿತ ವ್ಯಕ್ತಿಗಳು ಸೇನಾಧಿಕಾರಿಯ ಸೋದರನನ್ನು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು 54 ವರ್ಷದ ಲಾಯ್ಡ್ ನೆಹೆಮಿಯಾ ಎಂದು ಗುರುತಿಸಲಾಗಿದೆ, ಇವರು ಕಾಶ್ಮೀರದಲ್ಲಿ ಕರ್ನಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿಯ ಸಹೋದರರಾಗಿದ್ದಾರೆ, ಇವರು ತಮ್ಮ ನೆರೆಮನೆಯವರು ಮ್ಯೂಸಿಕ್ ಹಾಕಿದ್ದ ವೇಳೆ ಅದರ ಸೌಂಡ್ ಹೆಚ್ಚಾಗಿದ್ದರಿಂದ ಅನಾರೋಗ್ಯದಲ್ಲಿರುವ ತಾಯಿಗೆ ತೊಂದರೆಯಾಗುತ್ತದೆ, ಮ್ಯೂಸಿಕ್ ಸೌಂಡ್ ಕಡಿಮೆ ಮಾಡಿ ಎಂದು ಕೇಳಿಕೊಂಡರಂತೆ. ಅದಕ್ಕೆ ಕುಡಿದ ಮತ್ತಿನಲ್ಲಿದ್ದ ಮೂರರಿಂದ ಆರು ಮಂದಿ ಸೇನಾಧಿಕಾರಿಯ ಸೋದರ ಮತ್ತು ಸೋದರಿ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಸೋದರ ನಿನ್ನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಮೊನ್ನೆ ಏಪ್ರಿಲ್ 2 ರಂದು ಮುಂಜಾನೆ ಈ ಘಟನೆ ನಡೆದಿದ್ದು, ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಜ್ಞಾನನಗರದ ಬೃಂದಾವನ ಎಸ್ಟೇಟ್‌ನಲ್ಲಿ ಭಾರತೀಯ ಸೇನೆಯ ಸೇವೆ ಸಲ್ಲಿಸುತ್ತಿರುವ ಕರ್ನಲ್‌ನ ಸಹೋದರ ಮತ್ತು ಸಹೋದರಿಯ ಮೇಲೆ 3-6 ಕುಡುಕ ಯುವಕರು ಹಲ್ಲೆ ನಡೆಸಿದ್ದಾರೆ.

ಸೇವೆ ಸಲ್ಲಿಸುತ್ತಿರುವ ಅಧಿಕಾರಿಯ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅಧಿಕಾರಿಯ ಸಹೋದರ ಲಾಯ್ಡ್ ನೆರೆಹೊರೆಯವರಲ್ಲಿ ಮ್ಯೂಸಿಕ್ ಸೌಂಡ್ ಕಡಿಮೆ ಮಾಡುವಂತೆ ವಿನಂತಿಸಿಕೊಂಡಾಗ ನಿರಾಕರಿಸಿ ಶಾಂತವಾಗಿರುವಂತೆ ಕೇಳಿದಾಗ, ಪಾನಮತ್ತ ಯುವಕ ಲಾಯ್ಡ್ ಮನೆಗೆ ನುಗ್ಗಿ ಅವರನ್ನು ರಸ್ತೆಗೆ ಎಳೆದು ತಂದು ಹಲ್ಲೆ ನಡೆಸಿದ್ದಾರೆ. ಅದನ್ನು ತಡೆಯಲು ಪ್ರಯತ್ನಿಸಿದ ಸಹೋದರಿಯ ಮೇಲೂ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಕ್ಕೀಡಾದ ಸೇನಾಧಿಕಾರಿಯ ಸಹೋದರನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

SCROLL FOR NEXT