ರಾಜ್ಯ

ರೌಡಿಶೀಟ್‌ನಲ್ಲಿ ಫೈಟರ್‌ ರವಿ ಹೆಸರು ಮುಂದುವರಿಕೆಗೆ ಹೈಕೋರ್ಟ್ ತಡೆ

Manjula VN

ಬೆಂಗಳೂರು: ರೌಡಿಶೀಟ್‌ನಲ್ಲಿ ಫೈಟರ್ ರವಿ ಅಲಿಯಾಸ್ ಬಿ ಎಂ ಮಲ್ಲಿಕಾರ್ಜುನ ಅವರ ಹೆಸರು ಮುಂದುವರಿಸುವುದಕ್ಕೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ರೌಡಿ ಶೀಟ್‌ನಿಂದ ತಮ್ಮ ಹೆಸರು ತೆಗೆದುಹಾಕುವುದಕ್ಕೆ ಸಂಬಂಧಿಸಿದ ಮನವಿಯನ್ನು ತಿರಸ್ಕರಿದ್ದ ಪೊಲೀಸ್ ಇಲಾಖೆಯ ಕ್ರಮ ಪ್ರಶ್ನಿಸಿ ಫೈಟರ್ ರವಿ ಅಲಿಯಾಸ್ ಮಲ್ಲಿಕಾರ್ಜುನ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.

ಮಲ್ಲಿಕಾರ್ಜುನ ಅವರ ಹೆಸರನ್ನು ರೌಡಿ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಇದರಿಂದ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2019ರಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ರೌಡಿಶೀಟ್‌ನಿಂದ ಮಲ್ಲಿಕಾರ್ಜುನ ಹೆಸರು ತೆಗೆಯುವ ಕುರಿತಾದ ಮನವಿ ಪರಿಗಣಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸಿತ್ತು. ಆದರೆ, ಮಲ್ಲಿಕಾಜುನ ಮಾಡಿದ್ದ ಮನವಿಯನ್ನು ಪೊಲೀಸ್ ಇಲಾಖೆ 2020ರಲ್ಲಿ ತಿರಸ್ಕರಿಸಿತ್ತು. ಜತಗೆ, ಮುಂದಿನ ವರ್ಷಗಳಲ್ಲಿ ರೌಡಿಶೀಟ್‌ನಲ್ಲಿ ಅವರ ಹೆಸರು ಮುಂದುವರಿಸಲಾಗಿತ್ತು. ಅದನ್ನು ಆಕ್ಷೇಪಿಸಿ ಅವರು ಮತ್ತೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಹಿಂದೆ ತಮ್ಮ ವಿರುದ್ಧ ದಾಖಲಾಗಿದ್ದ ಆರು ಅಪರಾಧ ಪ್ರಕರಣಗಳನ್ನೂ ಹೈಕೋರ್ಟ್ ರದ್ದುಪಡಿಸಿದೆ. ಮತ್ತೊಂದು ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಸದ್ಯ ತಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಹೀಗಿದ್ದರೂ ಪ್ರತಿ ವರ್ಷ ರೌಡಿ ಶೀಟ್‌ನಲ್ಲಿ ಹೆಸರು ಮುಂದುವರಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಆಕ್ಷೇಪಿಸಿದ್ದರು.

SCROLL FOR NEXT