ಎಚ್.ಡಿ ಕುಮಾರಸ್ವಾಮಿ 
ರಾಜ್ಯ

ರಾಜ್ಯದಲ್ಲಿ ಅಮುಲ್ ಹಾಲು-ಮೊಸರು ಮಾರಾಟ: ನಂದಿನಿ ಮುಗಿಸಲು 3ನೇ ಸಂಚು ಎಂದ ಎಚ್‌ಡಿ ಕುಮಾರಸ್ವಾಮಿ

ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ʼ ಎನ್ನುವುದು ಕೇಂದ್ರ ಸರ್ಕಾರದ ಅಧಿಕೃತ ನೀತಿಯಂತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಬೆಂಗಳೂರು: ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ 3ನೇ ಸಂಚು ನಡೆಯುತ್ತಿದೆ. ಸಂಚು 1: ಅಮುಲ್ ಜತೆ ನಂದಿನಿ ವಿಲೀನ; ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ, ಸಂಚು 2: ಮೊಸರಿನ ಮೇಲೆ ಹಿಂದಿಯ 'ದಹಿ' ಪದ ಮುದ್ರಣ; ಕನ್ನಡಿಗರ ತೀವ್ರ ವಿರೋಧದಿಂದ ಎರಡನೇ ಸಂಚು ವಿಫಲ. 3ನೇ ಸಂಚನ್ನು ಸಫಲಗೊಳಿಸಲು ಕೇಂದ್ರ ಸರ್ಕಾರ ಅಮುಲ್ ಅನ್ನು ಮುಂದಿಟ್ಟುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ʼ ಎನ್ನುವುದು ಕೇಂದ್ರ ಸರ್ಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ ಅಮುಲ್‌ಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಚುಕುತ್ತಿದೆ.ಈಗ ಅಮುಲ್ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ ಎಂದು ಆರೋಪಿಸಿದ್ದಾರೆ.

ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರ್ಯಾಂಡ್‌ನಲ್ಲಿಯೇ ಕರ್ನಾಟಕದಲ್ಲಿ ಮಾರಲು ಹೊರಟಿರುವ ಅಮುಲ್, ನಂದಿನಿಯನ್ನು ಆಪೋಶನ ತೆಗೆದುಕೊಳ್ಳುವುದು ಖಚಿತ. ವಿಲೀನಕ್ಕೆ, ಹಿಂದಿ ಹೇರಿಕೆಗೆ ಕನ್ನಡಿಗರು ಪ್ರಬಲ ಪ್ರತಿರೋಧ ಒಡ್ಡುತ್ತಿರುವುದರಿಂದ ಕೆಎಂಎಫ್‌ನ ಕಥೆ ಮುಗಿಸಲೇಬೇಕು ಎಂದು ಅಮುಲ್ ಪಣ ತೊಟ್ಟಂತಿದೆ ಎಂದಿದ್ದಾರೆ.

ಕೆಎಂಎಫ್ ಜತೆ ಅಮುಲ್ ಅನಗತ್ಯ ಸ್ಪರ್ಧೆ ನಡೆಸಿ ದಿನದಿಂದ ದಿನಕ್ಕೆ ನಂದಿನಿಯನ್ನು ತುಳಿಯುವ ಹುನ್ನಾರ ಇದಾಗಿದೆ. ಸಹಕಾರಿ ಕ್ಷೇತ್ರದ ಪ್ರಸಿದ್ಧ ಸೋದರ ಸಂಸ್ಥೆಗಳ ನಡುವೆ ಅನಾರೋಗ್ಯಕರ ಪೈಪೋಟಿ ಯಾರಿಗೂ ಹಿತವಲ್ಲ. ಕೆಎಂಎಫ್ ರಾಜ್ಯದ ಸಾವಿರಾರು ಗ್ರಾಮಗಳ ಸಹಕಾರ ಸಂಘಗಳ ಮೂಲಕ ರೈತರಿಂದಲೇ ಹಾಲನ್ನು ನೇರವಾಗಿ ಖರೀದಿಸುತ್ತದೆ. ಬಿಜೆಪಿ ಡಬಲ್ ಎಂಜಿನ್ ಸರ್ಕಾರ ನಮ್ಮ ರಾಜ್ಯದ ಹಾಲು ಉತ್ಪಾದಕರನ್ನು ಬೀದಿಗೆ ತಳ್ಳಿ ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಹುನ್ನಾರ ನಡೆಸಿರುವುದು ಸ್ಪಷ್ಟ. ಇದುರೆಗೂ ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರದ ದಿವ್ಯಮೌನ, ಕೆಎಂಎಫ್ ನಿಷ್ಕ್ರಿಯತೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.

ಗುಜರಾತಿನಲ್ಲಿ ಎಂದೂ ಕೆಎಂಎಫ್ ಹಾಲು ಮಾರಿದ್ದಿಲ್ಲ. ಅದು ಅಮುಲ್‌ನ ಸ್ಥಳೀಯ ಮಾರುಕಟ್ಟೆ ಹಿತ, ಸಹಕಾರಿ ತತ್ತ್ವವನ್ನು ಗೌರವಿಸಿದೆ. ಹಾಲು ಸಮೃದ್ಧಿ ಇರುವ ಯಾವುದೇ ಮಹಾಮಂಡಳದ ಸ್ಥಳೀಯ ವ್ಯಾಪ್ತಿಯಲ್ಲಿ ಕೆಎಂಎಫ್ ತನ್ನ ಹಾಲನ್ನು ಮಾರುವುದಿಲ್ಲ. ಕರ್ನಾಟಕ ನೈಜ ಸಹಕಾರ ತತ್ತ್ವ ನಂಬಿದ್ದರೆ, ಗುಜರಾತ್ ಅಸಹಕಾರವನ್ನೇ ನಂಬಿದೆ ಎಂದು ಕಿಡಿಕಾರಿದ್ದಾರೆ.

ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ, ಎಚ್‌ಡಿ ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿದ್ದಾಗ ಯಲಹಂಕ ಮದರ್ ಡೈರಿಯಲ್ಲಿ ವಿಶೇಷ ಐಸ್ ಕ್ರೀಮ್ ಘಟಕ ಸ್ಥಾಪಿಸಿದ್ದರು. ಈ ಘಟಕದಿಂದ ದಶಕಗಳಿಂದ ನಿತ್ಯವೂ  ಕೆಎಂಎಫ್ ದೊಡ್ಡ ಪ್ರಮಾಣದಲ್ಲಿ ಅಮುಲ್ ಬ್ರ್ಯಾಂಡ್‌ನ ಐಸ್‌ಕ್ರೀಮ್ ತಯಾರಿಸಿ ಈಗಲೂ ಕೊಡುತ್ತಿದೆ. ಅಷ್ಟೇ ಅಲ್ಲ;‌ ರಾಜ್ಯ ಸರ್ಕಾರವು ಗುಜರಾತ್ ಹಾಲು ಮಹಾಮಂಡಳಿ ಅಮುಲ್‌ಗೆ ಬೆಂಗಳೂರಿನ ಕೋರಮಂಗಲದಲ್ಲಿ ಅತೀ ಕಡಿಮೆ ದರಕ್ಕೆ ಬೆಲೆ ಬಾಳುವ ಬೃಹತ್ ಜಾಗ ನೀಡಿದೆ. ಇಷ್ಟು ಔದಾರ್ಯ ತೋರಿದ್ದರೂ ಕರ್ನಾಟಕ ಹಾಲು ಉತ್ಪಾದಕರು ಮತ್ತು ಕೆಎಂಎಫ್‌ಗೆ ದೊಡ್ಡ ಖೆಡ್ಡಾ ತೋಡಲು ಅಮುಲ್ ಹೊರಟಿದೆ ಎಂದು ಆರೋಪಿಸಿದ್ದಾರೆ.

ಕನ್ನಡಿಗರಾದ ನಾವು ತಕ್ಷಣ ಎಚ್ಚೆತ್ತು ನಂದಿನಿಯನ್ನೇ ಅವಲಂಬಿಸಿರುವ ರಾಜ್ಯದ ರೈತರ ಹಿತವನ್ನು ಆದ್ಯತೆಯಲ್ಲಿ ರಕ್ಷಿಸಿ ಉಳಿಸಿಕೊಳ್ಳಬೇಕು. ನಮ್ಮ ಜನತೆ-ಗ್ರಾಹಕರು ನಂದಿನಿ ಉತ್ಪನ್ನಗಳನ್ನಷ್ಟೇ ಆದ್ಯತೆಯ ಮೇರೆಗೆ ಬಳಸಿ ರಾಜ್ಯದ ರೈತರ  ಬದುಕನ್ನು ಕಾಪಾಡಬೇಕು. ಇಲ್ಲಿನ ಡಬಲ್ ಎಂಜಿನ್ ಸರ್ಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿಎಂ ದೊಡ್ಡವರು, ಅವರು ಹೇಳಿದ್ದನ್ನು ನಾವು ಚಿಕ್ಕವರು ಕೇಳಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್ ಮಾರ್ಮಿಕ ನುಡಿ; ರಾತ್ರಿ ಆಪ್ತ ಶಾಸಕರೊಂದಿಗೆ ಸಭೆ!

ದುಬೈ ಏರ್ ಶೋ ವೇಳೆ ದುರಂತ; ಭಾರತದ ತೇಜಸ್ ಯುದ್ಧ ವಿಮಾನ ಪತನ, ಪೈಲಟ್ ಸಾವು! ತನಿಖೆಗೆ IAF ಆದೇಶ

"ದೇಶದ ಭದ್ರತೆಗೆ ಧಕ್ಕೆ ತಂದ್ರೆ ಬಿಡಲ್ಲ": ರಿಸಿನ್ ದಾಳಿ ಸಂಚು ರೂಪಿಸಿದ್ದ ಭಯೋತ್ಪಾದಕನಿಗೆ ಜೈಲಿನಲ್ಲಿ ಕೈದಿಗಳಿಂದ ಧರ್ಮದೇಟು; ವೈದ್ಯ ಉಗ್ರ ಆಸ್ಪತ್ರೆಗೆ ದಾಖಲು!

News headlines 21-11-2025| CM ಬದಲಾವಣೆ ವಿಷಯ; ಶಾಸಕರಿಗೆ ಹೈಕಮಾಂಡ್ ಮಹತ್ವದ ಸೂಚನೆ; ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಿಯಾಯಿತಿ; ಹಡಗು ನಿರ್ಮಾಣ, ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಇಬ್ಬರ ಬಂಧನ

Asia Cup Rising stars: ಸೂಪರ್ ಓವರ್ ನಲ್ಲಿ ಮುಗ್ಗರಿಸಿದ ಭಾರತ, ವೈಭವ್ ಸೂರ್ಯವಂಶಿಯನ್ನು ಯಾಕೆ ಬ್ಯಾಟಿಂಗ್ ಗೆ ಕಳುಹಿಸಲಿಲ್ಲ? ಅಭಿಮಾನಿಗಳ ಆಕ್ರೋಶ

SCROLL FOR NEXT