ರಾಜ್ಯ

ಬಂಡೀಪುರ ಅರಣ್ಯದಲ್ಲಿ ಮೋದಿ ಸಫಾರಿ ವೇಳೆ ಕಾಣದ ಹುಲಿ; ಹಿಡಿದು ಮಾರಿಬಿಡುತ್ತಾರೆ ಅನ್ನೋ ಭಯವಿರಬೇಕು ಎಂದ ಸಿದ್ದರಾಮಯ್ಯ

Ramyashree GN

ಚಾಮರಾಜನಗರ: ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರಕ್ಕೆ ಭೇಟಿ ನೀಡಿದ್ದು, ಬಂಡೀಪುರ ಹುಲಿ‌ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿದರು. ಎರಡು ಗಂಟೆಗಳ ಅವಧಿಯಲ್ಲಿ 22 ಕಿ.ಮೀ ಸಂಚರಿಸಿ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಂಡರು. ಆದರೆ, ಈ ವೇಳೆ ಹುಲಿ ಮಾತ್ರ ಪ್ರಧಾನಿಗೆ ಕಾಣಿಸಿಲ್ಲ ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿ ಅವರು ನಡೆಸಿದ ಸಫಾರಿ ವೇಳೆ ಹುಲಿ ಕಂಡುಬಾರದಿರುವ ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಕುರಿತು ಕುಟುಕಿದ್ದಾರೆ.

ಸಫಾರಿ ಸಮಯದಲ್ಲಿ ಸಫಾರಿ ವೇಳೆ ಆನೆಗಳು, ಜಿಂಕೆಗಳು, ಕಾಟಿಗಳು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಎದುರಾದವು. ಆದರೆ, ನಮಗೆ ಹುಲಿ ಕಾಣಿಸಲಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ‌ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಹುಲಿಯನ್ನು ಹಿಡಿದು ಮಾರಿಬಿಡುತ್ತಾರೆ ಎನ್ನುವ ಭಯಕ್ಕೆ, ಅವುಗಳು ಯಾವ ಗುಹೆಯೊಳಗೆ ಅಡಗಿ ಕುಳಿತಿವೆಯೋ.. ಅಯ್ಯೋ ಪಾಪ.! ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಮುಂದುವರಿದು, ಇನ್ನು ಕೆಲವೇ ದಿನಗಳಲ್ಲಿ ‘ಬಂಡಿಪುರ ಉಳಿಸಿ’ ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ನರೇಂದ್ರ ಮೋದಿ ಜೀ ಎಂದು ಟ್ವೀಟ್ ಮೂಲಕ ಕುಟುಕಿದ್ದಾರೆ

SCROLL FOR NEXT