ರಾಜ್ಯ

ರಾಜ್ಯದಲ್ಲಿ ಅಮುಲ್ ಹಾಲು, ಮೊಸರು ಮಾರಾಟಕ್ಕೆ ವಿರೋಧ, ಪ್ರತಿಭಟನೆ: ಕರವೇ ಕಾರ್ಯಕರ್ತರ ವಶಕ್ಕೆ ಪಡೆದ ಪೊಲೀಸರು

Manjula VN

ಬೆಂಗಳೂರು: ಕರ್ನಾಟಕದಲ್ಲಿ ಅಮುಲ್ ಹಾಲು-ಮೊಸರು ಮಾರಾಟ ಹಾಗೂ ನಂದಿನಿಯನ್ನು ಅಮುಲ್ ಜೊತೆಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲು, ಮೊಸರು, ತುಪ್ಪ, ಬೆಣ್ಣೆ, ಚೀಜ್ ಇತ್ಯಾದಿ ಅಮುಲ್ ಉತ್ಪನ್ನಗಳಾದ ಬೀದಿಗೆಸೆದು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಅಮುಲ್ ಹಾಲು-ಮೊಸರು ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಇಂದು ಬೆಳಗ್ಗೆ ಮೈಸೂರು ಬ್ಯಾಂಕ್ ವೃತ್ತದ ಬಳಿ ನೆರೆದು ಅಮುಲ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯ ಉಪಾಧ್ಯಕ್ಷ ದಾ.ಪಿ.ಆಂಜನಪ್ಪ, ಅಮುಲ್ ಸಂಸ್ಥೆ ಕನ್ನಡಿಗರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಕನ್ನಡಿಗರು ಕಟ್ಟಿದ ಹೆಮ್ಮೆಯ ಸಂಸ್ಥೆ ಕೆಎಂಎಫ್ (ನಂದಿನಿ). ಅದನ್ನು ನಾಶಪಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಕೇಂದ್ರ ಸರಕಾರ ನಂದಿನಿಯನ್ನು ಅಮುಲ್ ನೊಂದಿಗೆ ವಿಲೀನಗೊಳಿಸಲು ಯತ್ನಿಸುತ್ತಿದೆ. ಇಂಥದ್ದೇನಾದರೂ ನಡೆದರೆ ಕರ್ನಾಟಕದ ಜನತೆ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ರಾಜ್ಯಾಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ ಮಾತನಾಡಿ, ಅಮುಲ್ ಹಠಮಾರಿತನ ಮುಂದುವರಿಸಿ ಹಾಲು-ಮೊಸರು ವ್ಯಾಪಾರ ಮುಂದುವರಿಸಿದರೆ ಕರ್ನಾಟಕದಲ್ಲಿ ಅಮುಲ್ ನ ಎಲ್ಲ ಉತ್ಪನ್ನಗಳಿಗೂ ಬಹಿಷ್ಕಾರ ಹಾಕಬೇಕಾಗುತ್ತದೆ. ಅಮುಲ್ ಐಸ್ ಕ್ರೀಂ ನಿಂದ ಹಿಡಿದು ಬಿಸ್ಕೆಟ್ ವರೆಗೆ ಯಾವ ಉತ್ಪನ್ನವನ್ನೂ ಮಾರಾಟ ಮಾಡಲು ಬಿಡುವುದಿಲ್ಲ‌. ಹೀಗಾಗಿ ಅಮುಲ್ ಕೂಡಲೇ ಹಾಲು, ಮೊಸರು ವ್ಯಾಪಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಅಮುಲ್ ಪ್ರತಿಕೃತಿ ದಹನ ಮಾಡಲು ಕಾರ್ಯಕರ್ತರು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ವಿರೋಧದ ನಡುವೆಯೂ ಪ್ರತಿಕೃತಿ ದಹನಕ್ಕೆ ಮುಂದಾದ ಕರವೇ ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸಲಾಯಿತು.

SCROLL FOR NEXT