ಸಂಗ್ರಹ ಚಿತ್ರ 
ರಾಜ್ಯ

ರಾಜ್ಯದಲ್ಲಿ ಮತ್ತೆ ಆತಂಕ ಸೃಷ್ಟಿಸುತ್ತಿರುವ ಕೋವಿಡ್: ಸೋಂಕು ಹೆಚ್ಚುತ್ತಿದ್ದರೂ ಕ್ರಮ ಕೈಗೊಳ್ಳದ ಸರ್ಕಾರ, ಚುನಾವಣೆಯಲ್ಲಿ ಬ್ಯುಸಿ!

ದಿನಕಳೆಯುತ್ತಿದ್ದಂತೆ ನೆರೆ ರಾಜ್ಯಗಳಲ್ಲಿ ಮಹಾಮಾರಿ ಕೋವಿಡ್ ಸೋಂಕು ಹೆಚ್ಚಾಗುತ್ತಲೇ ಇದ್ದು, ಈ ಬೆಳವಣಿಗೆ ರಾಜ್ಯದಲ್ಲೂ ಆತಂಕವನ್ನು ಹೆಚ್ಚಿಸಿದೆ. ಆದರೆ, ಸರ್ಕಾರ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಚುನಾವಣೆಗೆ ಸಿದ್ಧತೆಗಳನ್ನು ನಡೆಸುತ್ತಿದೆ.

ಬೆಂಗಳೂರು: ದಿನಕಳೆಯುತ್ತಿದ್ದಂತೆ ನೆರೆ ರಾಜ್ಯಗಳಲ್ಲಿ ಮಹಾಮಾರಿ ಕೋವಿಡ್ ಸೋಂಕು ಹೆಚ್ಚಾಗುತ್ತಲೇ ಇದ್ದು, ಈ ಬೆಳವಣಿಗೆ ರಾಜ್ಯದಲ್ಲೂ ಆತಂಕವನ್ನು ಹೆಚ್ಚಿಸಿದೆ. ಆದರೆ, ಸರ್ಕಾರ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಚುನಾವಣೆಗೆ ಸಿದ್ಧತೆಗಳನ್ನು ನಡೆಸುತ್ತಿದೆ.

ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ, ಹರಿಯಾಣ, ಪುದುಚೇರಿ (ಪಾಂಡಿಚೇರಿ), ರಾಜಸ್ಥಾನ, ಕೇರಳ, ಮುಂಬೈ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿ, ಮಾಸ್ಕ್ ಗಳನ್ನು ಕಡ್ಡಾಯ ಮಾಡಲಾಗಿದೆ. ಆದರೆ, ರಾಜ್ಯ ಆರೋಗ್ಯ ಇಲಾಖೆ ಮಾತ್ರ ಈ ಕುರಿತು ಯಾವದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ತಿಳಿದುಬಂದಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಎಚ್‌ಎಫ್‌ಡಬ್ಲ್ಯೂಡಿ) ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿಕೆ ಅವರು ಮಾತನಾಡಿ, ಮಾಸ್ಕ್ ಬಳಕೆಯನ್ನು ಜಾರಿಗೊಳಿಸುವ ಕುರಿತು ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ ಎಂದು ಹೇಳಿದ್ದಾರೆ.

ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, ನೆರೆ ರಾಜ್ಯ ಕೇರಳದಲ್ಲಿ ಅತೀ ಹೆಚ್ಚು ಸಕ್ರಿಯ ಪ್ರಕರಣಗಳು ಕಂಡು ಬಂದಿದೆ. ಹೀಗಾಗಿ ಅಗತ್ಯ ಬಿದ್ದರೆ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇತರ ರಾಜ್ಯಗಳಿಗೆ ಹೋಲಿಸಿದರೆ, ಏಪ್ರಿಲ್ 12 ರವರೆಗೆ ದಾಖಲಾದ ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಕರ್ನಾಟಕವು ಒಂಬತ್ತನೇ ಸ್ಥಾನದಲ್ಲಿದೆ. ಕಳೆದ ಕೆಲವು ವಾರಗಳಲ್ಲಿ ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಏರಿಕೆ ಕಂಡಿದ್ದು, ಮಾರ್ಚ್ 31 ರಂದು 12 ಪ್ರಕರಣಗಳು ಕಂಡು ಬಂದಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,000 ಗಡಿ ದಾಟಿದೆ. ಇನ್ನು ಸಾರಿ ಹಾಗೂ ಐಎಲ್ಐ, ಹೆಚ್1ಎನ್1 ಮತ್ತು ಹೆಚ್3ಎನ್2 ಪ್ರಕರಣಗಳಲ್ಲಿ ಕ್ರಮೇಣ ಏರಿಕೆ ಕಂಡು ಬಂದಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿವೆ.

ಮಾರ್ಚ್‌ ಒಂದೇ ತಿಂಗಳಿನಲ್ಲಿ ಕೋವಿಡ್‌ನಿಂದ ಕರ್ನಾಟಕದಲ್ಲಿ 12 ಸಾವುಗಳು ದಾಖಲಾಗಿವೆ.. ರೋಗಿಗಳು ಇತರ ದೀರ್ಘಕಾಲಿಕ ರೋಗಗಳಿಂದ ಬಳುತ್ತಿದ್ದ ಹಿನ್ನೆಲೆಯಲ್ಲಿ ಸಾವುಗಳಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಏಪ್ರಿಲ್ 1 ರಿಂದ ಇಲ್ಲಿಯವರೆಗೆ ಇದೇ ರೀತಿ 9 ಸಾವುಗಳು ವರದಿಯಾಗಿವೆ,

ಎಕ್ಸ್‌ಬಿಬಿ 1.16 ರೂಪಾಂತರವು ಪ್ರಕರಣಗಳ ಹೆಚ್ಚಳಕ್ಕೆ ಕಾರಣವೆಂದು ತಜ್ಞರು ಹೇಳಿದ್ದಾರೆ, ಈ ಸೋಂಕಿಗೆ ಒಳಗಾದವರು ಸುಮಾರು 4-5 ದಿನಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ. ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳಲ್ಲಿ ಏರಿಕೆಗಳು ಕಂಡು ಬಂದರೂ, ಐಸಿಯು ದಾಖಲಾತಿಗಳಲ್ಲಿ ಏರಿಕೆಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ಕೋವಿಡ್ ಸೂಕ್ತವಾದ ನಡವಳಿಕೆ (ಸಿಎಬಿ) ಅನ್ನು ಅನುಸರಿಸದಿರುವುದು, ಅಂದರೆ ಜನಸಂದಣಿಯ ಸ್ಥಳಗಳಲ್ಲಿ ಮಾಸ್ಕ್ ಧರಿಸದಿರುವುದು ಮತ್ತು ಬೂಸ್ಟರ್ ಡೋಸ್‌ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಕಡಿಮೆಯಾಗಿರುವುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಸೋಂಕಿತರ ಪತ್ತೆಗೆ ದೈನಂದಿನ ಕೋವಿಡ್ ಪರೀಕ್ಷೆಗಳ ಹೆಚ್ಚಿಸಲು ಈಗಾಗಲೇ ಕ್ರಮಗಳ ಕೈಗೊಳ್ಳಲಾಗಿದೆ ಎಂದು  ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ, ಪ್ರಕರಣಗಳ ಉಲ್ಬಣವನ್ನು ನಿಭಾಯಿಸಲು ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಗಳಾದ್ಯಂತ ಕೋವಿಡ್ ಮಾಕ್ ಡ್ರಿಲ್‌ಗಳನ್ನೂ ಕೂಡ ನಡೆಸಲಾಗಿದೆ. ಮಾಕ್ ಡ್ರಿಲ್‌ಗಳಲ್ಲಿ ಆಮ್ಲಜನಕ, ವೆಂಟಿಲೇಟರ್-ಬೆಂಬಲಿತ ಮತ್ತು ಐಸಿಯು ಬೆಡ್‌ಗಳು, ವೈದ್ಯರ ಲಭ್ಯತೆ, ಆಮ್ಲಜನಕ ಪೂರೈಕೆ ಮತ್ತು ಔಷಧದ ದಾಸ್ತಾನು ಸೇರಿದಂತೆ ಹಾಸಿಗೆಯ ಸಾಮರ್ಥ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT