ರಾಜ್ಯ

'ಚುನಾವಣೆಯಲ್ಲಿ ಸ್ಪರ್ಧಿಸಬಹುದು... ಆದರೆ ಧಾರವಾಡ ನಗರ ಪ್ರವೇಶಿಸುವಂತಿಲ್ಲ': ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಶಾಕ್ ಕೊಟ್ಟ ಕೋರ್ಟ್

Srinivasamurthy VN

ಧಾರವಾಡ: ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಪ್ರಜಾಪ್ರತಿನಿಧಿಗಳ ನ್ಯಾಯಾಲಯ ಶಾಕ್ ನೀಡಿದ್ದು, ಚುನಾವಣೆ ಸ್ಪರ್ಧೆ ಮಾಡಬಹುದು.. ಆದರೆ ನಗರ ಪ್ರವೇಶ ಮಾಡುವಂತಿಲ್ಲ ಎಂದು ಹೇಳಿದೆ.

ಹೌದು... ಧಾರವಾಡದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ನ್ಯಾಯಾಲಯದಲ್ಲಿ ಭಾರೀ ಹಿನ್ನಡೆಯಾಗಿದೆ. ಅವರು ಧಾರವಾಡ ಪವೇಶಿಸಲು ಕೋರಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಮೇ 10ರಂದು ನಡೆಯುವ ಚುನಾವಣೆಗೆ ಈಗಾಗಲೇ ವಿನಯ್ ಕುಲಕರ್ಣಿ ಹೆಸರಿನಲ್ಲಿ ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿ ನಾಯಕ ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ. ಈ ಹತ್ಯ್ಎ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿತ್ತು. ಸುಪ್ರೀಂಕೋರ್ಟ್‌ ಆರೋಪಿಗೆ ಜಾಮೀನು ನೀಡುವಾಗ ಧಾರವಾಡ ಪ್ರವೇಶ ಮಾಡದಂತೆ ಷರತ್ತು ವಿಧಿಸಿದೆ.

ಧಾರವಾಡ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿ ವಿನಯ್ ಕುಲಕರ್ಣಿ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಮಾರ್ಚ್‌ನಲ್ಲಿ ವಜಾಗೊಳಿಸಿತ್ತು. ಇದರಿಂದಾಗಿ ಅವರಿಗೆ 2023ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಹಿನ್ನಡೆ ಉಂಟಾಗಿತ್ತು. ಬಳಿಕ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಈಗ ನ್ಯಾಯಾಲಯ ವಿನಯ್ ಕುಲಕರ್ಣಿ ನಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದು, ಅವರ ಅರ್ಜಿ ವಜಾಗೊಳಿಸಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಧಾರವಾಡ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಕಾರಣ ವಿನಯ್ ಕುಲಕರ್ಣಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣಾ ಪ್ರಚಾರವನ್ನು ಅವರು ಹೇಗೆ ನಡೆಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ವಿನಯ್ ಕುಲಕರ್ಣಿ ಧಾರವಾಡ ಕ್ಷೇತ್ರದ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದೆ. ಏಪ್ರಿಲ್ 18ರಂದು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಪರವಾಗಿ ಪ್ರೊ. ಸಿದ್ದಪ್ಪ ಪ್ಯಾಟಿ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

SCROLL FOR NEXT