ರಾಜ್ಯ

ಮಾಹಿತಿ ಹಕ್ಕಿಗೂ ಕೊಕ್ಕೆ; 2017 ರಿಂದ BBMP ಯಲ್ಲಿ RTI ಘಟಕವೇ ಇಲ್ಲ, ಅರ್ಜಿದಾರರ ಪರದಾಟ!

Srinivasamurthy VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2017 ರಿಂದ ಆರ್‌ಟಿಐ (ಮಾಹಿತಿ ಹಕ್ಕು) ಘಟಕವನ್ನು ಮುಚ್ಚಿರುವುದರಿಂದ, ಅರ್ಜಿದಾರರು ಈಗ ತಮ್ಮ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು (ಪಿಐಒ) ಹುಡುಕುವ ಪ್ರಯಾಸಕರ ಕೆಲಸ ಮಾಡಬೇಕಿದೆ. 

ಮೊದಲು, ಅರ್ಜಿದಾರರು ತಮ್ಮ ವಿನಂತಿಗಳನ್ನು ‘ಪಿಐಒ, ಬಿಬಿಎಂಪಿ’ಗೆ ತಿಳಿಸಬೇಕಾಗಿತ್ತು, ನಂತರ ಅದನ್ನು ಸಂಬಂಧಿಸಿದ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಆದರೆ ಈಗ ಅರ್ಜಿದಾರರು ಬಿಬಿಎಂಪಿ ವೆಬ್‌ಸೈಟ್‌ನಿಂದ ಪಿಐಒಗಳ ಪಟ್ಟಿಯನ್ನು ಪರಿಶೀಲಿಸಿದ ನಂತರ ಅಧಿಕಾರಿಯನ್ನು ಕಂಡುಹಿಡಿಯಬೇಕಾದ ಪರಿಸ್ಛಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಬಿಬಿಎಂಪಿ ವಿರುದ್ಧ ಕಿಡಿಕಾರಿರುವ ಆರ್‌ಟಿಐ ಕಾರ್ಯಕರ್ತರ ವೇದಿಕೆಯಾದ ಕೆಆರ್‌ಐಎ ಕಟ್ಟೆಯ ರವೀಂದ್ರನಾಥ ಗುರು ಅವರು, 'ಬಹುಶಃ ಬಿಬಿಎಂಪಿ ಅಧಿಕಾರಿಗಳು ಪಿಐಒ (ಸಾರ್ವಜನಿಕ ಮಾಹಿತಿ ಅಧಿಕಾರಿ)ಗಳನ್ನು ಹುಡುಕಲು ಜನರು ನಗರದಾದ್ಯಂತ ಪ್ರಯಾಣಿಸಬೇಕೆಂದು ಬಯಸುತ್ತಿದ್ದಾರೆ ಎಂದು ಅನಿಸುತ್ತಿದೆ. ಇದು ನಾಗರಿಕರ ಮಾಹಿತಿಯನ್ನು ನಿರಾಕರಿಸುವ ಬಿಬಿಎಂಪಿಯ ಕಾರ್ಯವಿಧಾನವಾಗಿದೆ ಎಂದು ಆರೋಪಿಸಿದ್ದಾರೆ. 

ಸಿವಿಐಸಿ ಬೆಂಗಳೂರಿನ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಮಾತನಾಡಿ, ಮಾಹಿತಿ ಹಕ್ಕು ಘಟಕವು ಸಕ್ರಿಯವಾಗಿದ್ದಾಗ ಪ್ರಕ್ರಿಯೆಯು ಸರಳವಾಗಿತ್ತು. ನಾನು ಮೂರು RTI  ಅರ್ಜಿಗಳನ್ನು ಸಲ್ಲಿಸಿದ್ದೆ. ಅವುಗಳಲ್ಲಿ ಒಂದು BBMP ಯಿಂದ 0-18 ವರ್ಷ ವಯಸ್ಸಿನ ಮಕ್ಕಳ ಸಮೀಕ್ಷೆಗೆ ಸಂಬಂಧಿಸಿದ್ದಾಗಿತ್ತು. ಆದರೆ ಈ ವರೆಗೂ ಅದಕ್ಕೆ ಉತ್ತರ ಸಿಕ್ಕಿಲ್ಲ. ಪಿಐಒಗಳು ಕ್ಷೇತ್ರಾಧಿಕಾರಿಗಳಾಗಿರುವುದರಿಂದ ಮತ್ತು ಸಹಾಯಕರಿಲ್ಲದ ಕಾರಣ ಅವರನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಸಾಮಾನ್ಯವಾಗಿ PIO ಗಳು RTI ಗಳನ್ನು ಸ್ವೀಕರಿಸುವುದಿಲ್ಲ ಮತ್ತು ಅದನ್ನು ಬೇರೆ ಇಲಾಖೆಗೆ ಸಲ್ಲಿಸಲು ಕೇಳಿಕೊಳ್ಳುವುದಿಲ್ಲ, ಇದರಿಂದಾಗಿ ಅರ್ಜಿದಾರರು ಗೊಂದಲಕ್ಕೊಳಗಾಗುತ್ತಾರೆ ಎಂದು ಅವರು ಹೇಳಿದರು.

ಈ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪ್ರತಿಕ್ರಿಯೆ ನೀಡಿದ್ದು, “ಆರ್‌ಟಿಐ ಸೆಲ್ ಅಗತ್ಯವಿಲ್ಲ. ಆ ವ್ಯವಸ್ಥೆಯು ಸಮಯ ತೆಗೆದುಕೊಳ್ಳುತ್ತದೆ ಮತ್ತು RTI ಕಾಯಿದೆಯು ಪ್ರತ್ಯೇಕ ಇಲಾಖೆಯನ್ನು ಕಡ್ಡಾಯಗೊಳಿಸುವುದಿಲ್ಲ. ಆರ್‌ಟಿಐ ಮನವಿಗಳನ್ನು ಹಿಂತಿರುಗಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಒಂದು ಇಲಾಖೆಗೆ ಸಂಬಂಧಿಸದ ಯಾವುದೇ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗುತ್ತದೆ" ಎಂದು ಅವರು ಹೇಳಿದರು.

ಅಂತೆಯೇ BBMP ವೆಬ್‌ಸೈಟ್ ಸುಮಾರು 500 PIOಗಳು ಮತ್ತು ಮೇಲ್ಮನವಿ ಪ್ರಾಧಿಕಾರಗಳ ಪಟ್ಟಿಯನ್ನು ಕನ್ನಡದಲ್ಲಿ ಮಾತ್ರ ಒಳಗೊಂಡಿದೆ. ಇಂಗ್ಲಿಷ್‌ನಲ್ಲಿ ಪಟ್ಟಿಯನ್ನು ಅಪ್‌ಲೋಡ್ ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ಭರವಸೆ ನೀಡಿದರು. 

ಕರ್ನಾಟಕ ಮಾಹಿತಿ ಆಯೋಗದ ವರದಿಯ ಪ್ರಕಾರ, 2016-2017ರಲ್ಲಿ 4,30,511 ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದಾಗ್ಯೂ, 2017 ರ ನಂತರ, ವೆಬ್‌ಸೈಟ್‌ನಲ್ಲಿ ಯಾವುದೇ ವಾರ್ಷಿಕ ವರದಿಗಳಿಲ್ಲ.

SCROLL FOR NEXT