ರಾಜ್ಯ

ಹೊಟ್ಟೆಯಲ್ಲಿ ಮೃತಪಟ್ಟಿದ್ದ ಮರಿ ಹೊರತೆಗೆದು ಆನೆ ರಕ್ಷಿಸಿದ ಪಶುವೈದ್ಯರು!

Manjula VN

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸುವರ್ಣ ಎಂಬ ಆನೆ ಹೊಟ್ಟೆಯಲ್ಲಿ ಮೃತಪಟ್ಟಿದ್ದ ಮರಿಯನ್ನು ಹೊರತೆಗೆಯುವಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆರೋಗ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಬನ್ನೇರ್ಘಟ್ಟ ಉದ್ಯಾನವನದಲ್ಲಿ ಸುವರ್ಣ ಎಂಬ ಹೆಸರಿನ 50 ವರ್ಷದ ಕಾಡಾನೆ ಹೊಟ್ಟೆಯಲ್ಲಿ ಮರಿ ಮೃತಪಟ್ಟಿದ್ದು ಸುಮಾರು ಮೂರು ದಿನಗಳಿಂದ ಹೆರಿಗೆ ನೋವಿನಿಂದ ಕಷ್ಟ ಪಡುತ್ತಿತ್ತು.

ಈ ಆನೆ ಈವರೆಗೂ 9 ಮರಿಗಳಿಗೆ ಜನ್ಮ ನೀಡಿದ್ದು, ದುರಾದೃಷ್ಟವಶಾತ್ 10ನೇ ಮರಿ ಹೊಟ್ಟೆಯಲ್ಲಿಯೇ ಮೃತಪಟ್ಟಿದೆ. ಆನೆಗೆ ಪಶುವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಮೃತಪಟ್ಟಿದ್ದ ಮರಿ ಆನೆಯನ್ನು ಹೊರೆತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆನೆಗೆ ಶಸ್ತ್ರಚಿಕಿತ್ಸೆ ಮಾಡಲೇಬೇಕಾಗಿತ್ತು, ಇಲ್ಲದಿದ್ದರೆ ಸುವರ್ಣಾ ಒಂದು ಅಥವಾ ಎರಡು ದಿನಗಳಲ್ಲಿ ಸಾಯುತ್ತಿದ್ದಳು. ಭಾರತದ ಯಾವುದೇ ಮೃಗಾಲಯ ಅಥವಾ ಆನೆ ರಕ್ಷಣಾ ಕೇಂದ್ರದಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆಸಿಲ್ಲ. ಇದೇ ಮೊದಲ ಬಾರಿಗೆ ಈ ರೀತಿಯ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಸಾಮಾನ್ಯವಾಗಿ, ಭ್ರೂಣವು ಸತ್ತಾಗ, ಗರ್ಭಾಶಯವು ಕೊಳೆಯಲು ಪ್ರಾರಂಭಿಸುತ್ತದೆ. ಇದರಿಂದ ತಾಯಿ ಆನೆ ಕೂಡ ಸಾವನ್ನಪ್ಪುತ್ತದೆ. ಇದೀಗ ಮೃತಪಟ್ಟಿರುವ ಮರಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಪರೀಕ್ಷೆ ಬಳಿಕ ನಿಖರ ಕಾರಣಗಳು ತಿಳಿದು ಬರಲಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಆನೆ ಆರೋಗ್ಯವಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬಿಬಿಪಿ)ದ ಪಶುವೈದ್ಯ ಉಮಾಶಂಕರ್ ಅವರು ಹೇಳಿದ್ದಾರೆ.

ಆನೆಯನ್ನು ಹಿಂಡಿನಿಂದ ಪ್ರತ್ಯೇಕವಾಗಿ ಇರಿಸಲಾಗಿದ್ದು, ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT