ರಾಜ್ಯ

ಮೈಸೂರು: ಮೈಲಾರಿ ಹೋಟೆಲ್ ನಲ್ಲಿ ದೋಸೆ ಮಾಡಿ, ಸವಿದ ಪ್ರಿಯಾಂಕಾ ಗಾಂಧಿ

Manjula VN

ಮೈಸೂರು: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಚುನಾವಣಾ ಪ್ರಚಾರದ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ ಮೈಸೂರಿನ ಅಗ್ರಹಾರದಲ್ಲಿರುವ ಹೋಟೆಲ್​ವೊಂದರಲ್ಲಿ ಸ್ವತಃ ದೋಸೆ ಸಿದ್ಧಪಡಿಸಿ, ಸವದಿದ್ದು, ಈ ಕುರಿತ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಮಂಗಳವಾರ ಟಿ.ನರಸೀಪುರ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ ಅವರು ರಾತ್ರಿ ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರು.

ಬೆಳಗ್ಗೆ ಶೃಂಗೇರಿಗೆ ಭೇಟಿ ನೀಡುವುದಕ್ಕೂ ಮುನ್ನ, ಹತ್ತಿರದಲ್ಲೇ ಇದ್ದ ಮೈಲಾರಿ ಹೋಟೆಲ್'ಗೆ ಭೇಟಿ ನೀಡಿದ್ದಾರೆ. ಈ ವೇಳೆ ಹೋಟೆಲ್​ನಲ್ಲಿ ದೋಸೆ ತಿನ್ನಲು ಬಂದಿದ್ದ ಗ್ರಾಹಕರು ಹಾಗೂ ಹೋಟೆಲ್ ಮಾಲೀಕರ ಜೊತೆ ಮಾತನಾಡಿದ್ದಾರೆ. ಈ ವೇಳೆ ದೋಸೆ ಮಾಡುವ ಟ್ರಿಕ್ಸ್ ಕಲಿಯಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಒಪ್ಪಿದ ಮಾಲೀಕರು ಪ್ರಿಯಾಂಕಾ ಅವರನ್ನು ಹೋಟೆಲ್'ನ ಅಡುಗೆ ಕೋಣೆಗೆ ಕರೆದುಕೊಂಡು ಹೋಗಿದ್ದು, ದೋಸೆ ಹಾಕುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ.

ಹಿಟ್ಟು ತೆಗೆದುಕೊಂಡು ತವಾ ಮೇಲೆ ಹುಯ್ಯುವಲ್ಲಿ ಪ್ರಿಯಾಂಕಾ ಗಾಂಧಿಯವರು ಯಶಸ್ವಿಯಾಗಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ದೋಸೆಗಳನ್ನು ಮಗುಚಿ ಹಾಕಲು ವಿಫಲವಾಗಿದ್ದರಿಂದಾಗಿ ಕೆಲ ದೋಸೆಗಳು ಸುಟ್ಟು ಕರಕಲಾದವು. ಈ ವೇಳೆ ಸುತ್ತಲೂ ನೆರೆದಿದ್ದ ಜನರು ಇದನ್ನು ಕಂಡು ನಕ್ಕರು.

ಬಳಿಕ ಅಡುಗೆ ಕೋಣೆಯಿಂದ ಹೊರ ಬಂದ ಪ್ರಿಯಾಂಕಾ ಅವರು, ಡಿ ಕೆ.ಶಿವಕುಮಾರ್ ಹಾಗೂ ಕರ್ನಾಟಕ ಉಸ್ತುವಾರಿ ಸುರ್ಜೆವಾಲಾ ಅವರೊಂದಿಗೆ ದೋಸೆ ಹಾಗೂ ಇಡ್ಲಿಯನ್ನು ಸವಿದರು. ನಂತರ ದೋಸೆ ರುಚಿಗೆ ಪ್ರಿಯಾಂಕಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಹೋಟೆಲ್ ಮಾಲೀಕರು ಹಾಗೂ ಅವರ ಕುಟುಂಬಸ್ಥರಿಗೆ ಧನ್ಯವಾದ ಹೇಳಿದ ಪ್ರಿಯಾಂಕಾ ಅವರು ಅವರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡರು. ಪ್ರಿಯಾಂಕಾ ಅವರು ದೋಸೆ ಮಾಡಿದ ವಿಡಿಯೋವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.

SCROLL FOR NEXT