ರಾಜ್ಯ

ಮೇ 10ಕ್ಕೆ ವಿಧಾನಸಭೆ ಚುನಾವಣೆ: ರಾಜ್ಯದ ಪ್ರವಾಸಿ ತಾಣಗಳು ಬಂದ್

Sumana Upadhyaya

ಬೆಂಗಳೂರು: ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ, ಅಂದು ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಲಾಗುತ್ತದೆ. ರಜೆಯೆಂದು ಹೊರಗಡೆ ಸುತ್ತಾಡಲು, ಪ್ರವಾಸಕ್ಕೆ ಹೋಗಿ ಮತದಾನ ಮಾಡುವುದನ್ನು ತಪ್ಪಿಸುವುದು ಬೇಡವೆಂದು ಸರ್ಕಾರ ಒಂದು ಐಡಿಯಾ ಮಾಡಿದೆ.

ಅಂದು ಬಹುತೇಕ ಪ್ರವಾಸಿ ತಾಣಗಳು ಬಂದ್ ಆಗಲಿವೆ. ಪ್ರವಾಸಿ ತಾಣಗಳು ಮಾತ್ರವಲ್ಲದೆ ಹೊಟೇಲ್ ಗಳು, ರೆಸಾರ್ಟ್ ಗಳಲ್ಲಿ ಸಹ ಮೇ 10ರಂದು ಬುಕ್ಕಿಂಗ್ ಗೆ ಅವಕಾಶವಿರುವುದಿಲ್ಲ. ಕಡ್ಡಾಯವಾಗಿ ಮತದಾರರು ಅಂದು ತಮ್ಮ ಹಕ್ಕು ಚಲಾಯಿಸಬೇಕೆಂಬುದು ಚುನಾವಣಾ ಆಯೋಗದ ಉದ್ದೇಶವಾಗಿದೆ. 

ಜನರು ಮತ ಚಲಾಯಿಸಿ ಬಂದು ಹೊಟೇಲ್, ರೆಸಾರ್ಟ್ ಬುಕ್ಕಿಂಗ್ ಮಾಡಿದರೆ ವಿಶೇಷ ರಿಯಾಯಿತಿ ನೀಡಲು ಅನೇಕ ಸಂಸ್ಥೆಗಳು, ಪ್ರವಾಸಿ ತಾಣಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದಾಗಿವೆ. ಆಯಾ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳನ್ನು ಮೇ 10ರಂದು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜೋಗ್ ಫಾಲ್ಸ್ ನ್ನು ಮೇ 10ರಂದು ಮುಚ್ಚಲಾಗುವುದು ಎಂದು ಶಿವಮೊಗ್ಗ ಡಿಸಿ ತಿಳಿಸಿದ್ದಾರೆ.

ಮೇ 10 ಕ್ಕೆ ಶೇ 17 ರಷ್ಟು ಬುಕ್ಕಿಂಗ್ ಆಗಿವೆ. ಅವರಲ್ಲಿ ಹೆಚ್ಚಿನವರು ಕರ್ನಾಟಕದ ಹೊರಗಿನವರು ಎಂದು ಜಂಗಲ್ ಲಾಡ್ಜ್‌ ಮತ್ತು ರೆಸಾರ್ಟ್‌ಗಳ ಅಧಿಕಾರಿಗಳು ತಿಳಿಸಿದ್ದಾರೆ. ಹೊಟೇಲ್ ನಲ್ಲಿ ಬುಕ್ಕಿಂಗ್ ಮಾಡಿದವರು ಮೇ 9 ಅಥವಾ ಮೇ 10 ರ ಮುಂಜಾನೆ ಹೊರಡುತ್ತಿದ್ದಾರೆ. ಆಡಳಿತ ಮಂಡಳಿಯು ತಮ್ಮ ಸಿಬ್ಬಂದಿಗೆ ಮತ ಚಲಾಯಿಸಲು ರಜೆ ನೀಡುತ್ತಿದೆ. ದೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಿಬ್ಬಂದಿಗೆ ರಜೆ ನೀಡಲಾಗುವುದು.

ಮೇ 10 ರಂದು ಮೃಗಾಲಯಗಳನ್ನು ಮುಚ್ಚಲಾಗುವುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ತಿಳಿಸಿದೆ. ಮೈಸೂರು ಮೃಗಾಲಯವು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತದೆ, ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಮುಚ್ಚಿ ಸಿಬ್ಬಂದಿಗೆ ಮತದಾನ ಮಾಡಲು ಅನುವು ಮಾಡಿಕೊಡುತ್ತದೆ.

ಅರಣ್ಯ ಅಧಿಕಾರಿಗಳು ಚುನಾವಣಾ ಆಯೋಗದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಮೇ 10ರಂದು ಸಫಾರಿಗೆ ರಜೆ ನೀಡಲು ಪರಿಶೀಲಿಸುತ್ತಿದ್ದಾರೆ. ವಿವಿಧ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ನಿರ್ದೇಶಕರು ಸಹ ಜಿಲ್ಲಾಡಳಿತದೊಂದಿಗೆ ಸಮಸ್ಯೆಯ ಬಗ್ಗೆ ಚರ್ಚಿಸುತ್ತಿದ್ದಾರೆ.

“ಮೇ 10ರಂದು ರಜಾದಿನವೆಂದು ಜನರು ಭಾವಿಸಿ ಸುತ್ತಾಡಲು ಹೋಗುವುದು, ಪ್ರವಾಸಕ್ಕೆ ಹೋಗುವುದು ಮಾಡಬಾರದು. ಆ ದಿನ ಬುಕ್ಕಿಂಗ್ ಮಾಡಿಕೊಳ್ಳದಂತೆ ನಾವು ಹೇಳುತ್ತೇವೆ. ನಮ್ಮ ಸಿಬ್ಬಂದಿಗಳು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂಬುದು ನಮ್ಮ ಉದ್ದೇಶ ಎಂದು ಕೆಎಸ್ ಟಿಡಿಸಿ ಅಧಿಕಾರಿಗಳು ಹೇಳುತ್ತಾರೆ. 

SCROLL FOR NEXT