ರಾಜ್ಯ

ಖಾಸಗಿ ಸಾರಿಗೆ ನಿರ್ವಾಹಕರ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ: ಸಚಿವ ರಾಮಲಿಂಗಾರೆಡ್ಡಿ

Manjula VN

ಬೆಂಗಳೂರು: ಖಾಸಗಿ ಸಾರಿಗೆ ನಿರ್ವಾಹಕರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ಕೈಗೊಳ್ಳಲಿದ್ದಾರೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಸೋಮವಾರ ಹೇಳಿದರು.

ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಖಾಸಗಿ ಬಸ್, ಆಟೋ ಮತ್ತು ಕ್ಯಾಬ್ ಯೂನಿಯನ್‌ಗಳೊಂದಿಗೆ ಎರಡನೇ ಸುತ್ತಿನ ಸಭೆಯನ್ನು ಸಚಿವರು ನಡೆಸಿದರು.

ಸಭೆ ಬಳಿಕ ಮಾತನಾಡಿದ ಅವರು, ಖಾಸಗಿ ಬಸ್ ಗಳನ್ನೂ ಶಕ್ತಿ ಯೋಜನೆಯಡಿ ತರಬೇಕು ಹಾಗೂ ತೆರಿಗೆ ಸಡಿಲಿಕೆ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿರ್ಧಾರ ತೆಗೆದುಕೊಳ್ಳಬೇಕೆಂದು ಹೇಳಿದರು.

ಕ್ಯಾಬ್ ಯೂನಿಯನ್‌ಗಳ ಸದಸ್ಯರು ಮಾತನಾಡಿ, ಸಭೆಯಲ್ಲಿ ಖಾಸಗಿ ಬಸ್, ಆಟೋ ಮತ್ತು ಕ್ಯಾಬ್ ಯೂನಿಯನ್‌ಗಳೊಂದಿಗೆ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವುದು ಮತ್ತು ಖಾಸಗಿ ಕ್ಯಾಬ್ ಅಗ್ರಿಗೇಟರ್‌ಗಳನ್ನು ನಿಯಂತ್ರಿಸುವುದು ಸೇರಿದಂತೆ ಖಾಸಗಿ ಟ್ರಾವೆಲ್ ಆಪರೇಟರ್‌ಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು ಎಂದು ಹೇಳಿದರು.

ಫೆಡರೇಶನ್‌ನ ಸದಸ್ಯ ನಟರಾಜ್ ಶರ್ಮಾ ಅವರು ಮಾತನಾಡಿ, “ಜುಲೈ 24 ರಂದು ನಡೆದ ಮೊದಲ ಸಭೆಯಲ್ಲಿ ಸಚಿವರು ನಮ್ಮ ಸಮಸ್ಯೆಗಳನ್ನು ಆಲಿಸಿದರು. ನಾವು ನಮ್ಮ ಬೇಡಿಕೆಗಳ ಈಡೇರಿಸುವಂತೆ ಮನವಿ ಮಾಡಿಕೊಂಡಿದ್ದೆವು. ಎರಡನೇ ಸಭೆಯಲ್ಲಿ, ನಮ್ಮ ಬೇಡಿಕೆಗಳನ್ನು ಪರಿಹರಿಸಲು ಮತ್ತು ಹೈಕೋರ್ಟಿನಿಂದ ತಡೆಯಾಜ್ಞೆ ತೆರವು ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಹೇಳಿದರು.

“ಮಹಿಳಾ ಪ್ರಯಾಣಿಕರ ಟಿಕೆಟ್ ವೆಚ್ಚವನ್ನು ಸರ್ಕಾರ ಮರುಪಾವತಿ ಮಾಡುವ, ತೆರಿಗೆ ಸಡಿಲಿಕೆ, ಶಕ್ತಿ ಯೋಜನೆಯಡಿ ಖಾಸಗಿ ಬಸ್‌ಗಳನ್ನು ಸೇರಿಸುವ ನಮ್ಮ ಪ್ರಮುಖ ಬೇಡಿಕೆಗಳನ್ನು ಇನ್ನೂ ಪರಿಹರಿಸಲಾಗಿಲ್ಲ. ಈ ಬೇಡಿಕೆಗಳ ಕುರಿತು ಆಗಸ್ಟ್ 10 ರ ಮೊದಲು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದಾರೆಂದು ತಿಳಿಸಿದರು.

ಆಗಸ್ಟ್ 10ರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ತಾತ್ಕಾಲಿಕವಾಗಿ ಹಿಂಪಡೆದಿರುವ ಬಂದ್ ಕರೆಯನ್ನು ಮರಳಿ ಆರಂಭಿಸಲಾಗುತ್ತದೆ ಎಂದು ಹೇಳಿದರು.

SCROLL FOR NEXT