ರಾಜ್ಯ

ಶಕ್ತಿ ಯೋಜನೆ: ಸಾರಿಗೆ ನಿಗಮಗಳಿಗೆ 125 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ

Lingaraj Badiger

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ವಿತರಿಸಲಾದ ಶೂನ್ಯ ಟಿಕೆಟ್‌ ದರ 687,49,57,753 ರೂ. ಆಗಿದ್ದು, ಈ ಮೊತ್ತದ ಒಂದು ಪಾಲು ಅಥವಾ ಮೊದಲ ಕಂತನ್ನು ರಾಜ್ಯ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. 

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಪ್ರಾರಂಭವಾಗಿ ಸುಮಾರು ಎರಡು ತಿಂಗಳ ನಂತರ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಮೊದಲ ಕಂತಿನ ಹಣವಾಗಿ ಒಟ್ಟು 125.48 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿಗೆ 47.15 ಕೋಟಿ ರೂಪಾಯಿ, ಬಿಎಂಟಿಸಿ 21.85 ಕೋಟಿ ರೂ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ(NWRTC)ಗೆ 32.57 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ(KKRTC) 23.90 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಾಲ್ಕು ನಿಗಮಗಳಿಗೂ ಪ್ರತೇಕವಾಗಿ ಹಣ ಬಿಡುಗಡೆ ಮಾಡಲಾಗಿದೆ.

ಕಳೆದ ಜೂನ್ 11ರಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈವರೆಗೆ ನಾಲ್ಕು ನಿಗಮಗಳಲ್ಲಿ 29,32,49,151 ಮಹಿಳೆಯರು ಪ್ರಯಾಣಿಸಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ನಾಲ್ಕು ನಿಗಮಗಳು ಒಟ್ಟು 687,49,57,753 ರೂ., ಮೌಲ್ಯದ ಶೂನ್ಯ ಟಿಕೆಟ್ ವಿತರಣೆ ಮಾಡಿವೆ.

SCROLL FOR NEXT