ಬೆಂಗಳೂರು: ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ ಮಂಗಳವಾರ ತಮ್ಮ ಜನ್ಮದಿನವನ್ನು ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯಿಂದಾಗಿ ಇಲ್ಲಿ ಆಶ್ರಯ ಪಡೆದಿರುವ ಮಣಿಪುರದ ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡರು.
ಖಾನ್ ಅವರ ವಿಧಾನಸಭಾ ಕ್ಷೇತ್ರವಾದ ಇಲ್ಲಿನ ಚಾಮರಾಜಪೇಟೆಯಲ್ಲಿರುವ ಸೇಂಟ್ ತೆರೇಸಾ ಶಿಕ್ಷಣ ಸಂಸ್ಥೆಗಳಲ್ಲಿ 29 ವಿದ್ಯಾರ್ಥಿನಿಯರು ಆಶ್ರಯ ಪಡೆದಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಚಾಮರಾಜ ಪೇಟೆಯ ಸೆಂಟ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ಪಡೆಯುತ್ತಿರುವ 29 ವಿದ್ಯಾರ್ಥಿನಿಯರ ಸಂಪೂರ್ಣ ಶಿಕ್ಷಣ ಹಾಗೂ ಆರೈಕೆ ವೆಚ್ಚ ಭರಿಸುವುದಾಗಿ ಸಚಿವರು ಘೋಷಿಸಿದ್ದಾರೆ. ಅಲ್ಲದೆ, ತುರ್ತು ಪರಿಹಾರವಾಗಿ ಎರಡು ಲಕ್ಷ ರೂ. ನೀಡಲಾಗಿದೆ ಎಂದು ಅದು ಹೇಳಿದೆ.
ಖಾನ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಮಣಿಪುರದಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ವಿದ್ಯಾರ್ಥಿಗಳು ತಮ್ಮ ತವರು ರಾಜ್ಯದಲ್ಲಿನ ಅಪಾಯಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿಗೆ ಬಂದಿರುವುದಾಗಿ ವಿವರಿಸಿದರು ಮತ್ತು ಆಶ್ರಯ ನೀಡಿದ ಸೇಂಟ್ ತೆರೇಸಾ ಶಿಕ್ಷಣ ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದರು ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ರಾಜ್ಯಕ್ಕೆ ಬರುವ ಮಣಿಪುರದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ನೀಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ
ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಕನಿಷ್ಠ ಏಳು ವರ್ಷಗಳ ಕಾಲ ಇಲ್ಲಿಯೇ ಇರಬೇಕಾಗುತ್ತದೆ ಮತ್ತು ಇಡೀ ಅವಧಿಗೆ ಶಿಕ್ಷಣದ ವೆಚ್ಚ ಮತ್ತು ಅವರ ಆರೈಕೆ ವೆಚ್ಚವನ್ನು ಭರಿಸುವುದಾಗಿ ಮತ್ತು ವಿದ್ಯಾರ್ಥಿಗಳು ಇಲ್ಲಿ ಅತ್ಯಂತ ಸುರಕ್ಷಿತವಾಗಿದ್ದು, ಅವರಿಗೆ ಬೇಕಾದ ಯಾವುದೇ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಮಣಿಪುರದಿಂದ ಬೆಂಗಳೂರಿಗೆ ಸುಮಾರು 200 ವಿದ್ಯಾರ್ಥಿಗಳು ಬಂದಿದ್ದು, ಅದರಲ್ಲಿ 29 ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ ಮತ್ತು ಇತರರಿಗೆ ಇತರ ಸಂಸ್ಥೆಗಳಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.