ಮಂಗಳೂರು: ನಿಗದಿತ ನಿರ್ಗಮನಕ್ಕೆ 10 ನಿಮಿಷಗಳ ಮೊದಲೇ ವಿಮಾನ ಹಾರಿಸಿ, 6 ಪ್ರಯಾಣಿಕರಿಗೆ ಸಂಕಷ್ಟ ಎದುರು ಮಾಡಿದ್ದ ಇಂಡಿಗೋ ವಿಮಾನಯಾನ ಸಂಸ್ಥೆ, ನಂತರ ಉಚಿತ ಟಿಕೆಟ್ ಗಳ ನೀಡುವ ಮೂಲಕ ಪ್ರಯಾಣಿಕರನ್ನು ಸಮಾಧಾನಪಡಿಸಿದ ಘಟನೆ ಶುಕ್ರವಾರ ವರದಿಯಾಗಿದೆ.
ಮಂಗಳೂರಿಗೆ ತೆರಳಬೇಕಿದ್ದ ವಿಮಾನ - 6E6162, ಬೆಂಗಳೂರು ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2.55 ಕ್ಕೆ ಹಾರಬೇಕಿತ್ತು. ಆದರೆ, ನಿಗದಿತ ನಿರ್ಗಮನಕ್ಕೆ 10 ನಿಮಿಷಗಳ ಮೊದಲೇ 2.45 ಕ್ಕೆ ವಿಮಾನ ಹೊರಟಿದೆ ಎಂದು ವರದಿಯಾಗಿದೆ.
ಇದರ ಪರಿಣಾಮ ಬೋರ್ಡಿಂಗ್ ಪಾಸ್ ಹೊಂದಿದ್ದರೂ ವಿಮಾನ ಹತ್ತಲಾಗದೆ 6 ಮಂದಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಬಳಿಕ ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳನ್ನು ಸಂಪರ್ಕಿಸಿದಾಗ ವಿಮಾನ ಬೇಗನೇ ನಿರ್ಗಮಿಸಿರುವುದಾಗಿ ಹೇಳಿದ್ದಾರೆ.
6 ಮಂದಿ ಪ್ರಯಾಣಿಕರನ್ನು ಬಿಟ್ಟು ಹೊರಟ ಹಿನ್ನೆಲೆಯಲ್ಲಿ ಕೂಡಲೇ ಎಚ್ಚೆತ್ತುಕೊಂಡ ವಿಮಾನಯಾನ ಸಂಸ್ಥೆಯು ಮುಂದಿನ ವಿಮಾನ (6E578)ರಲ್ಲಿ ಉಚಿತ ಟಿಕೆಟ್ ಗಳನ್ನು ನೀಡಿದ್ದಾರೆ. ಈ ವಿಮಾನ ರಾತ್ರಿ. 8.45ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟಿದ್ದು, ರಾತ್ರಿ 9.50ಕ್ಕೆ ಮಂಗಳೂರಿ ವಿಮಾನ ನಿಲ್ದಾಣ ತಲುಪಿದೆ.
ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳು ಮಾಡಿದ ಅಚಾತುರ್ಯದಿಂದಾಗಿ, 6 ಮಂದಿಯ ಪೈಕಿ ಇಬ್ಬರು ಪ್ರಯಾಣಿಕರು ದೆಹಲಿಗೆ ತೆರಳಬೇಕಿದ್ದ ವಿಮಾನ ಹತ್ತಲು ಸಾಧ್ಯವಾಗಿಲ್ಲ.
ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ಮಾತನಾಡಿ, ವಿಮಾನ 10 ನಿಮಿಷಕ್ಕೂ ಮೊದಲು ಹೊರಟಿರಲಿಲ್ಲ. ನಿಗದಿತ ಸಮಯಕ್ಕೆ ಹೊರಟಿತ್ತು ಎಂದು ಹೇಳಿದ್ದಾರೆ.
ವಿಮಾನವು ಮಧ್ಯಾಹ್ನ 2.43 ಕ್ಕೆ ಗೇಟ್‌ನಿಂದ ಹೊರಗಿತ್ತು. 2.57 ಕ್ಕೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿತು. ನಾವು ನಿರ್ಗಮನದ ಸಮಯವನ್ನು ಆಫ್-ದಿ-ಗ್ರೌಂಡ್ ಅನ್ನು ಪರಿಗಣಿಸುತ್ತೇವೆ. ಆದರೆ, ಪ್ರಯಾಣಿಕರಿಗೆ ಆಗಿರುವ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇನೆ,'' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಂಡಿಗೋ ಸಂಸ್ಥೆಗೆ ಡಿಜಿಸಿಎ 30 ಲಕ್ಷ ರೂ. ದಂಡ
ವಿಮಾನ ನಿರ್ಗಮನಕ್ಕೆ 25 ನಿಮಿಷಗಳ ಮೊದಲು ಬೋರ್ಡಿಂಗ್ ಗೇಟ್ ನ್ನು ಸಾಮಾನ್ಯವಾಗಿ ಬಂದ್ ಮಾಡಲಾಗುತ್ತದೆ. ಆದರೆ, ಪೈಲಟ್ ಮತ್ತು ಇತರೆ ಕಾರಣಗಳ ಮೇರೆಗೆ ಈ ಸಮಯವನ್ನು ಬದಲಿಸಲು ಅವಕಾಶವಿದೆ. ವಿಮಾನ ನಿರ್ಗಮನಕ್ಕೆ 2 ಗಂಟೆಗಳ ಮೊದಲು ವಿಮಾನ ನಿಲ್ದಾಣದಲ್ಲಿ ಇರಬೇಕು ಎಂದು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.
ವಿಮಾನ ಹೊರಡುವ ಒಂದು ಗಂಟೆ ಮುಂಚಿತವಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿರಬೇಕು. ಆದರೆ, ಪ್ರಯಾಣಿಕರು 15-20 ನಿಮಿಷ ತಡವಾಗಿ ಬಂದಿದ್ದು ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಯಾಣಿಕರಿಂದಲೇ ತಪ್ಪಾಗಿದ್ದರೆ, ಉಚಿತ ಟಿಕೆಟ್ ಗಳನ್ನೇಕೆ ನೀಡಲಾಯಿತು ಎಂಬ ಪ್ರಶ್ನೆಗೆ ವಿಮಾನಯಾನ ಸಂಸ್ಥೆಯ ವಕ್ತಾರರು ಸ್ಪಷ್ಟನೆ ಗಳನ್ನು ನೀಡಲಿಲ್ಲ. ಆದರೆ, ಮಕ್ಕಳು, ಹಿರಿಯ ನಾಗರೀಕರು ಎಂಬ ಅಂಶಗಳನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನಗಳನ್ನು ಮಾಡಿದರು.