ರಾಜ್ಯ

ಬೆಂಗಳೂರು: ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

Manjula VN

ಬೆಂಗಳೂರು: ರಾಜ್ಯದಲ್ಲಿ ಐದು ವರ್ಷದ ಒಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ಯಾವುದೇ ಲಸಿಕೆ ಇದ್ದರೂ ಅದನ್ನು ಹಾಕಲು ಹಾಗೂ ಉತ್ತೇಜಿಸಲು ಸರ್ಕಾರ ಕೈಗೊಂಡ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಚಾಲನೆ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಬೆಂಗಳೂರಿನ ಶಾಂತಿನಗರದ ಆಸ್ಟಿನ್ ಟೌನ್ ಹೆರಿಗೆ ಆಸ್ಪತ್ರೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಇಂದ್ರ ಧನುಷ್ 5.0 ಅಭಿಯಾನ ಆಗಸ್ಟ್ 7ರಿಂದ ಆರಂಭವಾಗಿ ಅಕ್ಟೋಬರ್ 12ರವರೆಗೆ ನಡೆಯಲಿದ್ದು, ಲಸಿಕೆ ಹಾಕದ ಮಕ್ಕಳನ್ನು ಗುರುತಿಸಲು ಆರೋಗ್ಯ ಇಲಾಖೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದೆ. ದಿನನಿತ್ಯದ ಲಸಿಕೆ ಸಮಯದಲ್ಲಿ ತಪ್ಪಿಸಿಕೊಂಡವರನ್ನು ಪತ್ತೆ ಹಚ್ಚಲು ಮತ್ತು ಲಸಿಕೆ ನೀಡಲು ಅವರಿಗೆ ಅನುವು ಮಾಡಿಕೊಡಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಡಿಫ್ತಿರಿಯಾ, ಪೋಲಿಯೊ, ಕ್ಷಯ, ದಡಾರ, ಹೆಪಟೈಟಿಸ್ ಬಿ, ನ್ಯುಮೋನಿಯಾ ಮತ್ತು ಇತರವುಗಳಂತಹ ಕೆಲವು ರೋಗಗಳನ್ನು ಲಸಿಕೆಯಿಂದ ಮಾತ್ರ ತಡೆಯಬಹುದು. ಮೆನಿಂಜೈಟಿಸ್‌ಗೆ ಕಾರಣವಾಗುವ ಹೀಮೊಫಿಲಸ್ ಇನ್‌ಫ್ಲುಯೆಂಜಾ ಟೈಪ್ ಬಿ ಅನ್ನು ಲಸಿಕೆ ಮೂಲಕವೂ ದೂರಾಗಿಸಬಹುದು ಎಂದು ಪಾಲಿಕೆ ವೈದ್ಯರು ಹೇಳಿದರು.

ಅಭಿಯಾನ ಆರಂಭಿಸಿರುವ ಬಿಬಿಎಂಪಿಯು, ಮೊದಲ ಸುತ್ತಿನ ಲಸಿಕೆಯಲ್ಲಿ ಲಸಿಕೆ ಹಾಕದ 1,487 ಮಂದಿ ಗರ್ಭಿಣಿಯರು ಮತ್ತು 7,467 0-5 ವರ್ಷದ ಮಕ್ಕಳನ್ನು ಗುರುತಿಸಿದ್ದು, ಆಗಸ್ಟ್ 7 ರಿಂದ 12 ರವರೆಗೆ ಅವರಿಗೆ ಲಸಿಕೆ ನೀಡುವ ಕೆಲಸ ಮಾಡಲಿದೆ. ಎರಡನೇ ಸುತ್ತು ಸೆಪ್ಟೆಂಬರ್ 11 ರಿಂದ 16 ರವರೆಗೆ ಹಾಗೂ ಮೂರನೇ ಸುತ್ತು ಅಕ್ಟೋಬರ್ 9 ರಿಂದ 14 ರವರೆಗೆ ನಡೆಯಲಿದೆ. ಈ ಅಭಿಯಾನವು ದಡಾರ ಮತ್ತು ರುಬೆಲ್ಲಾ ವಿರುದ್ಧ ಹೋರಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಅಂಗನವಾಡಿ, ಆರೋಗ್ಯ ಕೇಂದ್ರ ಮತ್ತು ಸಮುದಾಯ ಕೇಂದ್ರಗಳಲ್ಲಿ ಆರು ದಿನಗಳ ಕಾಲ 114 ಸಂಚಾರಿ ತಂಡಗಳು ಸೇರಿದಂತೆ ಒಟ್ಟು 1,067 ಲಸಿಕಾ ಶಿಬಿರಗಳನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕ್ ಚಂದ್ರ, ಜಂಟಿ ಆಯುಕ್ತ, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ.ಬಾಲಸುಂದರ್, ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ.ನಿರ್ಮಲಾ ಬುಗ್ಗಿ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT