ರಾಜ್ಯ

ಮಂಗಳೂರು: ಡ್ರಗ್ ಪೆಡ್ಲರ್ ಬಂಧನ, 2.5 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶ

Ramyashree GN

ಮಂಗಳೂರು: ಇಲ್ಲಿಗೆ ಸಮೀಪದ ತಲಪಾಡಿಯಲ್ಲಿ ಸಾರ್ವಜನಿಕರಿಗೆ ನಿಷೇಧಿತ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇರಳದ ನೆರೆಯ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಮೊಹಮ್ಮದ್ ರಫೀಕ್ (40) ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ ಸುಮಾರು 2.5 ಲಕ್ಷ ರೂ. ಮೌಲ್ಯದ 50 ಗ್ರಾಂ ಮೆಥಿಲೆನೆಡಿಯಾಕ್ಸಿ-ಮೆಥಾಂಫೆಟಮೈನ್ (ಎಂಡಿಎಂಎ), ಸಿಂಥೆಟಿಕ್ ಡ್ರಗ್, ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕದ ಮಾಪಕವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೆಲ್ಲದರ ಒಟ್ಟಾರೆ ಮೌಲ್ಯ ಸುಮಾರು 2.68 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ದಂಧೆಯಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಿಸಿಬಿ ಎಸಿಪಿ ಪಿಎ ಹೆಗ್ಡೆ, ಇನ್ಸ್‌ಪೆಕ್ಟರ್ ಎಚ್‌ಎಂ ಶ್ಯಾಮ್ ಸುಂದರ್ ನೇತೃತ್ವದಲ್ಲಿ ದಾಳಿ ನಡೆದಿದೆ.

ನಗರವನ್ನು ಮಾದಕ ದ್ರವ್ಯ ಮುಕ್ತಗೊಳಿಸುವ ಪ್ರಯತ್ನದ ಭಾಗವಾಗಿ ಮಂಗಳೂರು ಪೊಲೀಸರು ನಗರ ಮತ್ತು ಉಪನಗರಗಳಲ್ಲಿ ದಾಳಿಯನ್ನು ತೀವ್ರಗೊಳಿಸಿದ್ದಾರೆ. ಮಾದಕ ದ್ರವ್ಯ ದಂಧೆಕೋರರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ಮಾಹಿತಿ ನೀಡುವಂತೆ ಇಲಾಖೆ ಸಾರ್ವಜನಿಕರನ್ನು ಕೋರಿದೆ.

SCROLL FOR NEXT