ರಾಜ್ಯ

ರಾಮನಗರದಲ್ಲಿ ಭೀಕರ ಅಪಘಾತ: ಟ್ಯೂಷನ್ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಮಕ್ಕಳ ಮೇಲೆ ಹರಿದ ಗೂಡ್ಸ್ ವಾಹನ, ಇಬ್ಬರ ಸಾವು

Srinivasamurthy VN

ಬೆಂಗಳೂರು: ರಾಮನಗರದಲ್ಲಿ ಬುಧವಾರ ಭೀಕರ ಅಪಘಾತ ಸಂಭವಿಸಿದ್ದು, ಟ್ಯೂಷನ್ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಮಕ್ಕಳ ಮೇಲೆ ಗೂಡ್ಸ್ ವಾಹನ ಹರಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ರಾಮನಗರ ತಾಲ್ಲೂಕಿನ ಮಾಗಡಿ ರಸ್ತೆಯ ಗೊಲ್ಲರದೊಡ್ಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಐವರು ಮಕ್ಕಳ ಮೇಲೆ ಟಾಟಾ ಏಸ್ ಗೂಡ್ಸ್ ವಾಹನ ಹರಿದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. 7 ಮಂದಿಗೆ ಗಂಭೀರ ಗಾಯಗಳಾಗಿವೆ.

12 ವರ್ಷದ 9 ಮಕ್ಕಳ ಮೇಲೆ ವಾಹನ ಹರಿದಿದ್ದು, ಗಾಯಾಳು ಮಕ್ಕಳನ್ನು ರಾಮನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಮೃತರನ್ನು ರೋಹಿನ್‌ (5) ಮತ್ತು ಶಾಲಿನಿ (8) ಎಂದು ಗುರುತಿಸಲಾಗಿದೆ. ಅಂತೆಯೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸುಚಿತ್, ಗೌತಮಿ ಹಾಗೂ ಲೇಖನ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಮೂಲಗಳ ಪ್ರಕಾರ ಗೊಲ್ಲರದೊಡ್ಡಿ ಗ್ರಾಮದ ಮನೆಯೊಂದರಲ್ಲಿ ರಾತ್ರಿ 8ರ ಸುಮಾರಿಗೆ ಟ್ಯೂಷನ್‌ ಮುಗಿಸಿಕೊಂಡು‌ ಮನೆಗೆ ವಾಪಸ್ಸಾಗುತ್ತಿದ್ದ ಮಕ್ಕಳು ರಸ್ತೆ ದಾಟುತ್ತಿದ್ದಾಗ, ಮಾಗಡಿ ಕಡೆಯಿಂದ ವೇಗವಾಗಿ ಬಂದಿರುವ ಗೂಡ್ಸ್ ವಾಹನ ಮಕ್ಕಳ ಮೇಲೆ ಹರಿದಿದೆ. ಈ ವೇಳೆ ಗೂಡ್ಸ್ ಗಾಡಿ ಮಕ್ಕಳ ಮೇಲೆ ಉರುಳಿದ್ದು, ಈ ವೇಳೆ ಮಕ್ಕಳಿಗೆ ಗಂಭೀರಗಾಯವಾಗಿದೆ. ಸ್ಥಳೀಯರು ಮಕ್ಕಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ರೋಹಿನ್‌ ಮತ್ತು ಶಾಲಿನಿ ಬದುಕುಳಿಯಲಿಲ್ಲ. ಘಟನೆ ಬಳಿಕ, ಚಾಲಕ ಸ್ವಲ್ಪ ದೂರದಲ್ಲಿ ಗೂಡ್ಸ್‌ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಹೇಳಿದರು.

ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ಭೇಟಿ ನೀಡಿದ್ದಾರೆ.
 

SCROLL FOR NEXT