ರಾಜ್ಯ

ಲೋಕಾಯುಕ್ತ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಸಚಿವ ಸಂಪುಟ ಅಸ್ತು

Lingaraj Badiger

ಬೆಂಗಳೂರು: ಲೋಕಾಯುಕ್ತ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್​.ಕೆ. ಪಾಟೀಲ್ ಅವರು, ಸಚಿವ ಸಂಪುಟ ಸಭೆಯಲ್ಲಿ ಒಟ್ಟು 16 ವಿಷಗಳ ಮೇಲೆ ಚರ್ಚೆ ನಡೆದಿದೆ ಎಂದರು.

ಲೋಕಾಯುಕ್ತ ಪ್ರಕರಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಡಾ.ಎಂ. ಎಚ್. ನಾಗೇಶ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ಕಡ್ಡಾಯ ನಿವೃತ್ತಿ ನೀಡಲು ಅನುಮೋದನೆ ನೀಡಲಾಗಿದೆ ಎಂದು ಎಚ್ ಕೆ ಪಾಟೀಲ್ ಅವರು ತಿಳಿಸಿದ್ದಾರೆ.

ಇನ್ನು ಲೋಕಾಯುಕ್ತರ ಬಲೆಗೆ ಬಿದ್ದಿದ್ದ ರಾಮನಗರ ಜಿಲ್ಲಾ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಡಾ‌.ಉಷಾ ಕದರಮಂಡಲಗಿ, ಇಂದಿರಾನಗರ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ.ಎಸ್.ಟಿ ನಾಗಮಣಿ ಅವರಿಗೆ ಕಡ್ಡಾಯ ನಿವೃತ್ತಿ ದಂಡನೆಗೆ ಸಂಪುಟ ನಿರ್ಣಯ ಕೈಗೊಂಡಿದೆ ಎಂದು ಸಚಿವರು ಹೇಳಿದ್ದಾರೆ. 

ಅಲ್ಲದೆ, ಪೋಕ್ಸೋ ಜೈಲು ಶಿಕ್ಷೆಗೆ ಗುರಿಯಾಗಿರುವ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಎನ್ ಹಳ್ಳಿಗುಡಿ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಎಸ್.ಸಿ. ಎಸ್.ಟಿ. ಮೀಸಲು ಕ್ಷೇತ್ರಗಳಲ್ಲಿ 20 ಸಂಚಾರಿ ಆರೋಗ್ಯ ಘಟಕಗಳ ಸ್ಥಾಪನೆಗೆ 20.07 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಏರೋ ಸ್ಪೇಸ್ ಉತ್ಪಾದನೆ ಹಾಗೂ ರಕ್ಷಣಾ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆಗೂ ಅನುಮೋದನೆ ದೊರಕಿದೆ. ಸೈಬರ್ ಅಪರಾಧ ತಡೆಗಟ್ಟುವುದು ಸೇರಿದಂತೆ ಕ್ರಮ ತೆಗೆದುಕೊಳ್ಳಲು ಕೇಂದ್ರದ ಉಪಯೋಗ ಪಡೆಯುವುದು ಹಾಗೂ ಇದರ ಪರಿಷ್ಕೃತ ವೆಚ್ಚ 391 ಕೋಟಿ ರೂಪಾಯಿ ಬಿಡುಗಡಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 325 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಆಸ್ಪತ್ರೆ ಕಟ್ಟಡದ ಪರಿಷ್ಕೃತ ವೆಚ್ಚ 187.90 ಕೋಟಿ ರೂಪಾಯಿ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

SCROLL FOR NEXT