ರಾಜ್ಯ

ಅಟ್ರಾಸಿಟಿ ಪ್ರಕರಣದಲ್ಲಿ ಉಪೇಂದ್ರಗೆ ಬಿಗ್ ರಿಲೀಫ್: ನಟನ ವಿರುದ್ಧದ ಎಫ್ಐಆರ್ ಗೆ ಹೈಕೋರ್ಟ್ ತಡೆ

Vishwanath S

ಬೆಂಗಳೂರು: ನಟ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿರುದ್ಧ ದಾಖಲಾಗಿರುವ ಎಫ್ಐಆರ್ ಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು ಬಂಧನ ಭೀತಿಯಿಂದ ನಟ ಪಾರಾಗಿದ್ದಾರೆ.

ತಮ್ಮ ಮೇಲೆ ದಾಖಲಾಗಿರುವ FIR ರದ್ದುಗೊಳಿಸುವಂತೆ ಉಪೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಎಫ್ಐಆರ್ ಗೆ ತಡೆಯಾಜ್ಞೆ ನೀಡಿದೆ. 

ಹಿರಿಯ ವಕೀಲ ಉದಯ್ ಹೊಳ್ಳ ಅವರು ಉಪೇಂದ್ರ ಪರ ವಾದ ಮಂಡಿಸಿದ್ದು ದುರುದ್ದೇಶದಿಂದ ಆ ಪದ ಬಳಕೆ ಮಾಡಿದ್ದಲ್ಲ. ಎಲ್ಲರ ಬಗ್ಗೆಯೂ ಉಪೇಂದ್ರರಿಗೆ ಗೌರವವಿದೆ. ಅಲ್ಲದೆ ತಾವು ಆಡಿದ್ದ ಮಾತಿನ ಬಗ್ಗೆ ಕ್ಷಮೆ ಕೇಳಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿದ್ದ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಗಾದೆ ಮಾತು ಉಲ್ಲೇಖಿಸಿ ಉಪೇಂದ್ರ ಹೇಳಿಕೆ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಇದಕ್ಕೆ ಅನ್ವಯವಾಗುವುದಿಲ್ಲ ಎಂದು ವಾದ ಮಂಡನೆ ಮಾಡಿದ್ದರು.

ಜಾತಿ ನಿಂದನೆ ಆರೋಪ ತೀವ್ರ ಪ್ರತಿಭಟನೆಗಳು ಶುರುವಾದ ಹಿನ್ನೆಲೆಯಲ್ಲಿ ಉಪೇಂದ್ರ ಅವರ ಮನೆಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಬೆಂಗಳೂರಿನ ಕತ್ತರಿಗುಪ್ಪೆ ಮತ್ತು ಸದಾಶಿವ ನಗರದ ತಮ್ಮ ನಿವಾಸಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಉಪೇಂದ್ರ ವಿರುದ್ಧ ಪ್ರತಿಭಟನೆಗಳು ಶುರುವಾಗಿದೆ. ರಾಮನಗರಲ್ಲಿ ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಾರೋಹಳ್ಳಿ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಮುಖಂಡರು ಉಪೇಂದ್ರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದರು. ಉಪೇಂದ್ರ ಹೇಳಿಕೆ ಖಂಡಿಸಿ ಸಮತಾ ಸೈನಿಕ ದಳ ಮತ್ತು ದಲಿತ ಪರ ಒಕ್ಕೂಟಗಳು ಆಕ್ರೋಶ ಹೊರಹಾಕಿದ್ದವು. 

SCROLL FOR NEXT