ಬೆಂಗಳೂರು: ತಮಿಳುನಾಡು ಸರ್ಕಾರ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿದ್ದು, ಈ ನಡುವಲ್ಲೇ ರಾಜ್ಯದ ರೈತರ ಹಿತ ಕಾಪಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಯವರು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ತಮಿಳುನಾಡಿಗೆ ನೈಋುತ್ಯ ಮತ್ತು ಈಶಾನ್ಯ ಮನ್ಸೂನ್ ಮಳೆಯಾಗುತ್ತಿರುವುದರಿಂದ ನಾವು ನೀರು ಬಿಡಲು ಸಾಧ್ಯವಿಲ್ಲ. ಈ ವಾಸ್ತವಾಂಶದ ಮೇಲೆ ನಾವು ಗಟ್ಟಿನಿಲುವು ತೆಗೆದುಕೊಳ್ಳಬೇಕು. ತಮಿಳುನಾಡು ಮತ್ತೆ ಕ್ಯಾತೆ ತೆಗೆದಿರುವುದು ನಿಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸಿದ್ದೇನೆ. ತಮಿಳುನಾಡು ಸುಪ್ರೀಂಕೋರ್ಚ್‌ಗೆ ಹೋಗಬಹುದೆಂದು ಮಾಧ್ಯಮದಲ್ಲಿ ಗಮನಿಸಿದ್ದೇವೆ. ಈ ವಿಚಾರದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇರುವುದನ್ನು ಲೆಕ್ಕಿಸದೆ ಸಿಡಬ್ಲೂಡಿಟಿ ಆದೇಶ ಉಲ್ಲಂಘನೆ ಮಾಡಿ ನಾಲ್ಕು ಪಟ್ಟು ಕುರುವೈ ಪ್ರದೇಶ ಬೆಳೆಗೆ ನೀರನ್ನು ಒದಗಿಸಿದೆ.
ಇದನ್ನು ನಮ್ಮ ಅಧಿಕಾರಿಗಳು ಸಿಡಬ್ಲೂಎಂಎದಲ್ಲಿ ಪ್ರತಿಭಟಿಸದೆ ಸುಮ್ಮನೆ ಇದ್ದದ್ದು ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಿದೆ. ಈಗಿರುವ ನಮ್ಮ ನಾಲ್ಕು ಜಲಾಶಯಗಳ ನೀರಿನ ಮಟ್ಟಬೆಂಗಳೂರು ನಗರ, ಕಾವೇರಿ ಜಲಾನಯನ ಪ್ರದೇಶದ ನಗರ ಮತ್ತು ಗ್ರಾಮಗಳ ಕುಡಿಯುವ ನೀರಿಗೆ ಕೊರತೆಯಾಗುತ್ತದೆ. ಅದೇ ರೀತಿ ಕಾವೇರಿ ಜಲಾನಯನ ಪ್ರದೇಶದ ಖಾರಿಫ್ ಬೆಳೆಗಳಿಗೆ ನೀರಿನ ಕೊರತೆಯಾಗುತ್ತದೆ. ಹೀಗಾಗಿ ನೀರು ಬಿಡುವುದು ಕರ್ನಾಟಕದ ಜನತೆ ಮತ್ತು ರೈತರನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಕಾವೇರಿ ಜಲಾನಯನ ಪ್ರದೇಶದ ನೀರಿನ ಹಿತಾಸಕ್ತಿ ಕಾಪಾಡುತ್ತೀರೆಂದು ನಂಬಿರುವೆ ಎಂದು ಹೇಳಿದ್ದಾರೆ.