ರಾಜ್ಯ

ಉಡುಪಿ ವಾಶ್ ರೂಂ ವಿಡಿಯೋ ಪ್ರಕರಣ: ಸಿಐಡಿ ತನಿಖೆ ಉತ್ತಮ ಪ್ರಗತಿಯಲ್ಲಿದೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Ramyashree GN

ಉಡುಪಿ: ಇಲ್ಲಿನ ಪ್ಯಾರಾಮೆಡಿಕಲ್ ಕಾಲೇಜಿನ ವಾಶ್‌ರೂಂ ವಿಡಿಯೋ ಪ್ರಕರಣದ ಸಿಐಡಿ ತನಿಖೆ ಉತ್ತಮ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ ಮತ್ತು ಗೃಹ ಇಲಾಖೆಯು ತನಿಖೆ ಮೇಲೆ ನಿಗಾ ವಹಿಸುತ್ತಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೋಮವಾರ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಘಟನೆಯಲ್ಲಿ ಷಡ್ಯಂತ್ರ ನಡೆಸಿರುವ ಆರೋಪದ ಮೇಲೆ ಪೂರಕ ತನಿಖೆಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಸಿಐಡಿ ತಂಡ ಈಗಾಗಲೇ ಕಾಲೇಜಿಗೆ ಭೇಟಿ ನೀಡಿ ಸಂಬಂಧಪಟ್ಟವರ ಹೇಳಿಕೆಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಸಿಐಡಿ ತನಿಖೆ ಬಗ್ಗೆ ರಾಜಕೀಯ ಕಾರಣದಿಂದ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿರಬೇಕು. ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಮತ್ತು ಎತ್ತಿಹಿಡಿಯಲು ಸರ್ಕಾರ ಬದ್ಧವಾಗಿದೆ ಮತ್ತು ಘಟನೆಯ ತನಿಖೆ ನಿಷ್ಪಕ್ಷಪಾತವಾಗಿರುತ್ತದೆ ಎಂದು ಹೇಳಿದರು.

ಮಣಿಪಾಲದ ಪಬ್‌ಗಳಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರ ದಾಳಿ ಕುರಿತು ಮಾತನಾಡಿದ ಹೆಬ್ಬಾಳ್ಕರ್, ಕ್ರಮ ಕೈಗೊಳ್ಳುವಾಗ ಸರ್ಕಾರ ಯಾರನ್ನೂ ಗುರಿಯಾಗಿಸಿಕೊಂಡಿಲ್ಲ. ಕ್ಲಬ್‌ಗಳು ಮತ್ತು ಪಬ್‌ಗಳು ಪರವಾನಗಿ ಅಡಿಯಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಮತ್ತು ಅವರು ನಿಗದಿತ ನಿಯಮಗಳ ಪ್ರಕಾರ ಕೆಲಸ ಮಾಡಲು ಬದ್ಧರಾಗಿರಬೇಕು ಎಂದರು.

ಕಾನೂನುಬದ್ಧ ವ್ಯಾಪಾರ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗುವುದು ಮತ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನಿರ್ದಿಷ್ಟ ಸಂಸ್ಥೆಗಳ ವಿರುದ್ಧ ಸರ್ಕಾರ ಯಾವುದೇ ಪಕ್ಷಪಾತ ಮಾಡಿಲ್ಲ ಎಂದು ಅವರು ಹೇಳಿದರು.

SCROLL FOR NEXT