ರಾಜ್ಯ

ಕಾರ್ಕಳ: ಶಾಲೆ ಎದುರು ಬಾರ್‌ಗೆ ಅನುಮತಿ; ಅಧಿಕಾರಿಗಳ ನಡೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

Manjula VN

ಉಡುಪಿ: ರಾಜ್ಯದ ಎಲ್ಲಾ ಶಾಲೆಗಳ ಮಕ್ಕಳು ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿದ್ದ ಸಂದರ್ಭದಲ್ಲಿ ಕಾರ್ಕಳದ ಬಜಗೋಳಿ ಸಮೀಪ ಮುಡಾರು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಾತ್ರ ಧ್ವಜಸ್ತಂಭದ ಮುಂದೆ ಧರಣಿ ಕುಳಿತಿದ್ದು ಕಂಡು ಬಂದಿತ್ತು.

ಮುಡಾರು ಗ್ರಾಮದಲ್ಲಿ 70 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ ಸರ್ಕಾರಿ ಶಾಲೆಯ ಕೆಲವೇ ದೂರದಲ್ಲಿ ಖಾಸಗಿ ಕಟ್ಟಡದಲ್ಲಿ ಬಾರ್ ಒಂದನ್ನು ತೆರೆಯುವುದಕ್ಕೆ ಸಿದ್ಧತೆ ನಡೆಯುತ್ತಿದ್ದು, ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಇದರಂತೆ ಶಾಲಾ ಮಕ್ಕಳು ಮಂಗಳವಾರ ರಾಷ್ಟ್ರಧ್ವಜ ಹಾರುತ್ತಿದ್ದ ಧ್ವಜಸ್ತಂಭದ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. 300ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಧ್ವಜಸ್ತಂಭದ ಬಳಿಯೇ ಕುಳಿತು, ಪ್ರತಿಭಟಿಸಿದ್ದರು.

ಪವಿತ್ರ ದೇವಾಲಯದಂತಿರುವ ಶಾಲೆ ಮುಂಭಾಗ ಬಾರ್ ತೆರೆಯಲು ಅಬಕಾರಿ ಇಲಾಖೆ ಪರವಾನಗಿ ನೀಡಿದೆ. ಶಾಲಾಭಿವೃದ್ಧಿ ಸಮಿತಿ, ಪಾಲಕರು ಸ್ಥಳೀಯ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿಗೂ ಇದರ ವಿರುದ್ಧ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಅಬಕಾರಿ ಸಚಿವರು, ಶಿಕ್ಷಣ ಸಚಿವರಿಗೆ ಹಾಗೂ ಮುಖ್ಯಮಂತ್ರಿಗೆ ಈಗಾಗಲೇ ಮನವಿ ನೀಡಿದ್ದು ಯಾವುದೇ ಸ್ಪಂದನೆ ಇಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

ಏನೇ ಆದರೂ ಬಾರ್ ತೆರೆಯಲು ಅವಕಾಶ ನೀಡುವುದಿಲ್ಲ. ಕೂಡಲೇ ಈ ನಿರ್ಧಾರ ಹಿಂದೆಗೆದುಕೊಳ್ಳಬೇಕೆಂದು ಮಕ್ಕಳು ಪಟ್ಟು ಹಿಡಿದಿದ್ದರು. ಪ್ರತಿಭಟನೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಪಾಲಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

ಲಾಡ್ಜ್‌ನ ಮಾಲೀಕ ಹರೀಶ್ ಡಿ ಸಾಲಿಯಾನ್ ಅವರು ಏಪ್ರಿಲ್ 2023 ರಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು CL-7 ಪರವಾನಗಿಯನ್ನು ಪಡೆದಿದ್ದು, ಅಬಕಾರಿ ಅಧಿಕಾರಿಗಳು ನಿಯಮಗಳು ಮತ್ತು ನಿಬಂಧನೆಗಳ ಆಧಾರದ ಮೇಲೆ ಪರವಾನಗಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಶಾಲೆಯ ಗೇಟ್ ಮತ್ತು ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಡದ ನಡುವಿನ ಅಂತರ 102 ಮೀಟರ್ ಗಳಷ್ಟಿದೆ. ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರ ಪ್ರಕಾರ, ಅನುಮತಿ ನೀಡಲು ಅಗತ್ಯವಿರುವ ಕನಿಷ್ಠ ಅಂತರವು 100 ಮೀಟರ್ ಆಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಲಕರು ಹಾಗೂ ವಿದ್ಯಾರ್ಥಿಗಳ ಜತೆಗೂಡಿ ಪ್ರತಿಭಟನೆ ನಡೆಸಿದ ಎಸ್‌ಡಿಎಂಸಿ ಸದಸ್ಯ ವಿನ್ಸೆಂಟ್‌ ಡಿಸೋಜ ಅವರು ಮಾತನಾಡಿ, ಶಾಲೆ ಮತ್ತು ಬಾರ್‌ ನಡುವಿನ ಅಂತರ 40 ಮೀಟರ್‌ ಕೂಡ ಇಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಅಬಕಾರಿ ಅಧಿಕಾರಿಗಳು ಪರವಾನಗಿ ನೀಡಿದ್ದಾರೆ. ಹೀಗಾಗಿ ನಾವೂ ಕೂಡ ಪ್ರತಿಭಟನೆಯಲ್ಲಿ ಕೈಜೋಡಿಸಿದ್ದೇವೆಂದು ಹೇಳಿದ್ದಾರೆ.

ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಕೂಡ ನಡೆಸಲಾಗುತ್ತಿದ್ದು, ಕನ್ನಡ ಮಾಧ್ಯಮ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 239 ವಿದ್ಯಾರ್ಥಿಗಳು ಓದುತ್ತಿದ್ದಾರೆ, ಎಲ್ ಕೆಜಿ ಮತ್ತು ಯುಕೆಜಿ ವಿಭಾಗದಲ್ಲಿ 51 ವಿದ್ಯಾರ್ಥಿಗಳಿದ್ದಾರೆ. ಬಾರ್ ಅನುಮತಿ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ಮಾತನಾಡಿ, ನಲ್ಲೂರು ಗ್ರಾಮ ಪಂಚಾಯತ್ ಬಾರ್ ಮಾಲೀಕರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ” ನೀಡುವ ಮೊದಲು ನಿಯಮಗಳನ್ನು ಅನುಸರಿಸಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ನಡುವೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಲಾಯಿತಾದರೂ, ಸಚಿವರು ಸಂಪರ್ಕಕ್ಕೆ ಸಿಗಲಿಲ್ಲ.

SCROLL FOR NEXT