ರಾಜ್ಯ

ಪ್ರತಿಷ್ಠಿತ ಐಐಎಸ್ ಸಿ ಪ್ರವೇಶಕ್ಕೆ ತಡೆ: ಕ್ಯಾಂಟೀನ್‌ನ ಹೊರಗಿನ ಉದ್ಯಾನದಲ್ಲಿ ತೀಸ್ತಾ ಸೆಟಲ್ವಾಡ್ ಉಪನ್ಯಾಸ!

Shilpa D

ಬೆಂಗಳೂರು: ಕೋಮು ಸೌಹಾರ್ದತೆ ಮತ್ತು ನ್ಯಾಯದ ಕುರಿತು ಉಪನ್ಯಾಸ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಗೆ ಬುಧವಾರ ಬಂದಿದ್ದ ತಮಗೆ ಪ್ರವೇಶ ನಿರಾಕರಿಸಲಾಯಿತು ಎಂದು ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಆರೋಪಿಸಿದ್ದಾರೆ.

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಬುಧವಾರ ಸಂಜೆ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ 'ಬ್ರೇಕ್ ದಿ ಸೈಲೆನ್ಸ್' ಎಂಬ ವಿದ್ಯಾರ್ಥಿಗಳ ಗುಂಪಿನಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮಕ್ಕಾಗಿ ಸಿಸಿಇ ಲೆಕ್ಚರ್ ಹಾಲ್  ಕಾಯ್ದಿರಿಸಲಾಗಿತ್ತು.

ಆದರೆ, ಕೊನೆಯ ಗಳಿಗೆಯಲ್ಲಿ ಅಧಿಕಾರಿಗಳು ತೀಸ್ತಾ ಅವರನ್ನು ಸಭಾಂಗಣಕ್ಕೆ ಪ್ರವೇಶಿಸಲು ನಿರಾಕರಿಸಿದರು, ಐಐಎಸ್‌ಸಿ ಕ್ಯಾಂಟೀನ್‌ನ ಹೊರಗಿನ ಉದ್ಯಾನದಲ್ಲಿ ಸಭೆ ನಡೆಸಲು ಒತ್ತಾಯಿಸಿದರು ಎಂದು ಸೆಟಲ್ವಾಡ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿನ್ನೆ, ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನನಗೆ ಅಸಾಮಾನ್ಯ ಅನುಭವವಾಯಿತು. ಕೆಲವು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು 'ಕೋಮು ಸೌಹಾರ್ದತೆ ಮತ್ತು ನ್ಯಾಯ' ಕುರಿತು CCE ಹಾಲ್‌ನಲ್ಲಿ ಉಪನ್ಯಾಸಕ್ಕಾಗಿ ನನ್ನನ್ನು ಆಹ್ವಾನಿಸಿದ್ದರು , ಆದರೆ ಐಐಎಸ್ಸಿ ಆಡಳಿತ ಮಂಡಳಿಯು ಸಭೆಯನ್ನು ಕೊನೆ ಕ್ಷಣದಲ್ಲಿ ರದ್ಧುಗೊಳಿಸಿ, ಇನ್‌ಸ್ಟಿಟ್ಯೂಟ್‌ನ ಗೇಟ್‌ಗ ಪ್ರವೇಶಿಸದಂತೆ ತಡೆಯಲು ಪ್ರಯತ್ನಿಸಿತು ಎಂದು ಹೇಳಿದ್ದಾರೆ.

ಸುಮಾರು  40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕ್ಯಾಂಟೀನ್‌ನ ಹೊರಗಿನ ಉದ್ಯಾನದಲ್ಲಿ ಕುಳಿತು ಭಾರತದಲ್ಲಿ ನ್ಯಾಯ, ಶಾಂತಿ, ನಿರ್ಣಾಯಕ ಘಟ್ಟದ ಬಗ್ಗೆ ಚರ್ಚಿಸಿದೆವು. ಇಂದು ನಾಗರಿಕರು ಸಾಮೂಹಿಕವಾಗಿ ಒಗ್ಗೂಡಿ, ವೈಚಾರಿಕತೆ, ಭಿನ್ನಾಭಿಪ್ರಾಯಕ್ಕಾಗಿ ಮಾತನಾಡುವ ಅಗತ್ಯತೆ ಬಗ್ಗೆ  ಚರ್ಚೆ ನಡೆಸಿದೆವು ಎಂದು ತೀಸ್ತಾ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು IISc ಅಧಿಕಾರಿಗಳು ಲಭ್ಯವಾಗಲಿಲ್ಲ.

21 ಶತಮಾನದ ಆಧುನಿಕ ಭಾರತದಲ್ಲಿ ಕೋಮು ಸೌಹಾರ್ದತೆ ಮತ್ತು ಶಾಂತಿ ನಿರ್ಲಕ್ಷಿತ ಪದವಾಗಬಾರದು ಎಂದು ಹೇಳಿದ್ದಾರೆ. ಭಾರತದಲ್ಲಿ ಕೋಮು ಗಲಭೆಗಳು, ಮುಸ್ಲಿಮರು ಮತ್ತು ಭಿನ್ನಾಭಿಪ್ರಾಯಗಳ ಕಿರುಕುಳದ ಕುರಿತು ತೀಸ್ತಾ ಮಾತನಾಡಿದರು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಪ್ರಕರಣದಲ್ಲಿ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.

SCROLL FOR NEXT