ರಾಜ್ಯ

ಕಂದಾಯ ಇಲಾಖೆಯ ತಕರಾರು ಪ್ರಕರಣಗಳ 4 ತಿಂಗಳಲ್ಲಿ ಇತ್ಯರ್ಥಗೊಳಿಸಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ

Manjula VN

ಬೆಂಗಳೂರು: ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಮಟ್ಟದ ನ್ಯಾಯಾಲಯಗಳಲ್ಲಿ 6 ತಿಂಗಳಿಂದ 5 ವರ್ಷಗಳವರೆಗಿನ ನೂರಾರು ತಕರಾರು ಪ್ರಕರಣಗಳು ಬಾಕಿ ಉಳಿದಿದ್ದು, ಈ ಎಲ್ಲಾ ಪ್ರಕರಣಗಳನ್ನು 4 ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದ್ದಾರೆ.

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಐದು ವರ್ಷಗಳಿಂದ ಬಾಕಿ ಉಳಿದಿರುವ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಸೂಚನೆ ನೀಡಿದರು.

ಬೆಂಗಳೂರು ಪ್ರಾದೇಶಿಕ ವಿಭಾಗದ ತಹಶೀಲ್ದಾರ್‌ ನ್ಯಾಯಾಲಯಗಳಲ್ಲಿ 6 ತಿಂಗಳಿಂದ 5 ವರ್ಷಗಳವರೆಗಿನ 6,859 ಪ್ರಕರಣಗಳ ಬಾಕಿ ಉಳಿದಿವೆ. ಇದರಿಂದ ಸಾರ್ವಜನಿಕರು ಪ್ರತಿ ನಿತ್ಯ ತಹಶೀಲ್ದಾರ್‌ ಕಚೇರಿಗೆ ಅಲೆಯುವಂತಾಗಿದೆ. ತಹಶೀಲ್ದಾರ್‌ ಕಚೇರಿಯಲ್ಲಿ ಬಾಕಿ ಉಳಿದಿರುವ 4,000 ಪ್ರಕರಣಗಳನ್ನು ಮುಂದಿನ 4 ತಿಂಗಳ ಒಳಗಾಗಿ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳ ಪೈಕಿ ದೊಡ್ಡಬಳ್ಳಾಪುರ 5,683, ಬೆಂಗಳೂರು ದಕ್ಷಿಣ 6129, ಬೆಂಗಳೂರು ಉತ್ತರ 6035, ಚಿಕ್ಕಬಳ್ಳಾಪುರ 3014, ಚಿತ್ರದುರ್ಗ 1374, ದಾವಣಗೆರೆ 152, ಹೊನ್ನಾಳಿ 456, ಕೋಲಾರ 5112, ರಾಮನಗರ 4210, ಶಿವಮೊಗ್ಗ 613,ಸಾಗರ 411, ತುಮಕೂರು 7354,ಮಧುಗಿರಿ 3167 ಮತ್ತು ತಿಪಟೂರಿನ 742 ಪ್ರಕರಣಗಳೂ ಸೇರಿ ಒಟ್ಟು 45,482 ಪ್ರಕರಣಗಳು ಬಾಕಿ ಇವೆ. ಜಿಲ್ಲಾಧಿಕಾರಿ ನ್ಯಾಯಾಲಯಗಳ ಪೈಕಿ ಬೆಂಗಳೂರು ಗ್ರಾಮಾಂತರ 1384, ಬೆಂಗಳೂರು ನಗರ 4974, ಚಿಕ್ಕಬಳ್ಳಾಪುರ 429, ಚಿತ್ರದುರ್ಗ 1711, ದಾವಣಗೆರೆ 81, ಕೋಲಾರ 102, ರಾಮನಗರ 501, ಶಿವಮೊಗ್ಗ 73, ತಮಕೂರಿನ 697 ಸೇರಿ ಒಟ್ಟು 10,065 ಪ್ರಕರಣಗಳು ಬಾಕಿ ಇವೆ.

ಉನ್ನತ ಅಧಿಕಾರಿಗಳೇ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸದಿದ್ದರೆ ತಹಶೀಲ್ದಾರರಿಂದ ಪರಿಣಾಮಕಾರಿ ಕೆಲಸ ನಿರೀಕ್ಷಿಸುವುದು ಹೇಗೆ, ಇತರರಿಗೆ ಕೆಟ್ಟ ಮಾದರಿಯಾಗಬೇಡಿ’ ಎಂದು ಡಿಸಿ ಮತ್ತು ಎಸಿಗಳಿಗೆ ಸೂಚನೆ ನೀಡಿದರು.

ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಹಾಗೂ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್ 15ರಿಂದ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದೆ. ಇನ್ನು ಮುಂದೆ ರಾಜ್ಯದ ಎಲ್ಲ ಎಸಿ-ಡಿಸಿ ಕಚೇರಿಯಿಂದ ಸರ್ಕಾರಕ್ಕೆ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು. ಭೌತಿಕವಾಗಿ ಪತ್ರ ಸ್ವೀಕರಿಸುವುದಿಲ್ಲ ಎಂದು ತಿಳಿಸಿದರು.

SCROLL FOR NEXT