ರಾಜ್ಯ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಹೆಸರು ನಾಮಕರಣ ಮಾಡಲು ಚಿಂತನೆ: ಸಿಎಂ ಸಿದ್ದರಾಮಯ್ಯ

Sumana Upadhyaya

ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಐಟಿ-ಬಿಟಿ ಕಂಪೆನಿಗಳಿಗೆ ಹೆಸರುವಾಸಿ. ಕಂಪೆನಿಗಳ ಪ್ರಾರಂಭಕ್ಕೆ ಜಮೀನು ಕೊಟ್ಟಿದ್ದು ಹಿಂದುಳಿದ ವರ್ಗಗಳ ಹರಿಕಾರ, ಸಾಮಾಜಿಕ ನ್ಯಾಯದ ಚಿಂತಕ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು ಅವರು, ಹೀಗಾಗಿ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ ಎಂದು ಹೆಸರು ಇಡಲು ಚಿಂತನೆ ಮಾಡಿದ್ದೇನೆ. ಇದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಂಗಳೂರಿಗೆ ಸಿಲಿಕನ್ ವ್ಯಾಲಿ ಅಂತ ಹೆಸರು ಬಂದಿದೆ ಅಂದರೇ ಅದಕ್ಕೆ ದೇವರಾಜ ಅರಸು ಅವರ ಕೊಡುಗೆಯೂ ಇದೆ ಎಂದರು. ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿದರು. 

ಗೇಣಿದಾರರಿಗೆ ಮಾಲಿಕತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು ಅರಸು. ಮಾಜಿ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಇದರ ಹೋರಾಟ ಮಾಡಿದರು. ತಿಮ್ಮಪ್ಪ ಅವರು ಸಭಾಧ್ಯಕ್ಷರಾಗಿ ಮತ್ತು ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಗೋಡು ತಿಮ್ಮಪ್ಪ ಅವರು ಅಕ್ರಮವಾಗಿ ಮನೆಯಲ್ಲಿ ವಾಸಿಸುವವರೇ ಮನೆ ಒಡೆಯ ಅಂತ ಮಾಡಿದರು. ತಿಮ್ಮಪ್ಪ ಅವರಿಗೆ ಪ್ರಶಸ್ತಿ ಕೊಟ್ಟಿದ್ದು ಅದರ ಮೌಲ್ಯ ಹೆಚ್ಚಿಸಿದೆ ಎಂದರು.

ದೇವರಾಜ ಅರಸು ಅವರು ಅನೇಕ ಕಾರ್ಯಕ್ರಮ ಮಾಡಿದರು. ಅರಸು ವಿಚಾರ ಇಟ್ಟುಕೊಂಡು ಬೆಳೆದವರು ಶಾಸಕರು ಮತ್ತು ಸಚಿವರಾಗಿದ್ದಾರೆ. ಒಂದು ಬಾರಿ ದೇವರಾಜ ಅರಸು ತರ ನೀವು ಆಗಬೇಕು ಅಂತ ನನಗೆ ಯಾರೋ ಒಬ್ಬರು ಅಂದರು. ಆಗ ಸಿದ್ದರಾಮಯ್ಯ ಸಿದ್ದರಾಮಯ್ಯನೇ, ದೇವರಾಜ ಅರಸು, ದೇವರಾಜ ಅರಸುನೇ ಅಂತ ಹೇಳಿದೆ. ಅವರ ಜಿಲ್ಲೆಯಿಂದ ನಾನು ಬಂದಿದ್ದೇನೆ ಎಂಬ ಹೆಮ್ಮೆಯಿದೆ ಎಂದರು. 

ಕಾವೇರಿ ನದಿ ನೀರಿನ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆಗಿಳಿಯಲು ಅವರಿಗೆ ಯಾವ ಹಕ್ಕಿದೆ, ರಾಜ್ಯವನ್ನು ಲೂಟಿ‌ ಹೊಡೆದು ಹಾಳು ಮಾಡಿ ಆರ್ಥಿಕವಾಗಿ ದಿವಾಳಿ ಮಾಡಿ ಹೋದರು ಎಂದು ಹಿಂದಿನ ಬಿಜೆಪಿ ಸರ್ಕಾರವನ್ನು ಟೀಕಿಸಿದರು.

SCROLL FOR NEXT