ನಟ ಗಣೇಶ್ 
ರಾಜ್ಯ

ನಿಮಯ ಉಲ್ಲಂಘಿಸಿ ಕಟ್ಟಡ ನಿರ್ಮಾಣ: 7 ದಿನಗಳಲ್ಲಿ ಉತ್ತರಿಸುವಂತೆ ನಟ ಗಣೇಶ್‌ಗೆ 'ಹೈ ಕೋರ್ಟ್' ಸೂಚನೆ

ಬಂಡೀಪುರ ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯಲ್ಲಿ ಬರುವ ತಮ್ಮ ಜಮೀನಿನಲ್ಲಿ ನಿಯಮ ಉಲ್ಲಂಘಿಸಿ, ಜೆಸಿಬಿ ಬಳಕೆ ಮಾಡಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ಸಂಬಂಧಿಸಿದಂತೆ ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಗೆ 7 ದಿನಗಳಲ್ಲಿ ನಟ ಗಣೇಶ್‌...

ಬೆಂಗಳೂರು: ಬಂಡೀಪುರ ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯಲ್ಲಿ ಬರುವ ತಮ್ಮ ಜಮೀನಿನಲ್ಲಿ ನಿಯಮ ಉಲ್ಲಂಘಿಸಿ, ಜೆಸಿಬಿ ಬಳಕೆ ಮಾಡಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ಸಂಬಂಧಿಸಿದಂತೆ ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಗೆ 7 ದಿನಗಳಲ್ಲಿ ನಟ ಗಣೇಶ್‌ ಪ್ರತಿಕ್ರಿಯೆ ಸಲ್ಲಿಸಬೇಕು. ಇದಾದ 4 ವಾರಗಳಲ್ಲಿ ಸಮಿತಿಯು ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕೆ ಅನುಮತಿಸಿ, ಈಗ ಅದಕ್ಕೆ ನಿರ್ಬಂಧ ವಿಧಿಸಿರುವ ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಯ ಸದಸ್ಯ ಕಾರ್ಯದರ್ಶಿ ಅವರ ನೋಟಿಸ್‌ ವಜಾ ಮಾಡುವಂತೆ ಕೋರಿ ನಟ ಗಣೇಶ್‌ ಕಿಶನ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಯ ಸದಸ್ಯ ಕಾರ್ಯದರ್ಶಿ ಅವರು ಸಲ್ಲಿಸಲು ಸೂಚಿಸಿರುವ ದಾಖಲೆಗಳನ್ನು ನಟ ಗಣೇಶ್‌ ಅವರು ಏಳು ದಿನಗಳಲ್ಲಿ ಸಲ್ಲಿಸಬೇಕು. ಇದಾದ ನಾಲ್ಕು ವಾರಗಳಲ್ಲಿ ಸಂಬಂಧಿತ ಅಧಿಕಾರಿ ಕ್ರಮಕೈಗೊಳ್ಳಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಕೆ ನಂದಕುಮಾರ್‌ ಅವರು “ಅರ್ಜಿದಾರರ ವಾದ ಆಲಿಸದೇ ಆಕ್ಷೇಪಾರ್ಹ ಆದೇಶ ಮಾಡಲಾಗಿದೆ. ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸ್ಥಳ ಪರಿಶೀಲನೆ ನಡೆಸಿಲ್ಲ. ಅರ್ಜಿದಾರರು ಕಟ್ಟಡ ನಿರ್ಮಾಣವನ್ನೇ ಇನ್ನೂ ಆರಂಭಿಸಿಲ್ಲ. ಅದಾಗ್ಯೂ, ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಮುಂದಾಗುವ ಮೂಲಕ ನಿಮಯ ಉಲ್ಲಂಘಿಸಲಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ತಾತ್ಕಾಲಿಕ ಮನೆ ನಿರ್ಮಾಣಕ್ಕೆ ನೀಡಿರುವ ಅನುಮತಿಯ ಭಾಗವಾಗಿ ಭೂಮಿಯನ್ನು ಸಮತಟ್ಟುಗೊಳಿಸಲು ಜೆಸಿಬಿ ಬಳಕೆ ಮಾಡಲಾಗಿದೆ. 10 ವರ್ಷದ ಹಳೆಯ ಗಿಡಗಳನ್ನು ನೆಡಲು ಮತ್ತು ಅಪರೂಪದ ಸಸಿಗಳನ್ನು ನೆಡಲು ನೆಲವನ್ನು ಅಗೆದು ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಪಾರ ಪ್ರಮಾಣದ ಹಣ ವಿನಿಯೋಗಿಸಿ ಸಾಮಗ್ರಿಗಳನ್ನು ಖರೀದಿಸಿ ಸಂಗ್ರಹಿಸಿದ್ದು, ಆಳುಗಳು ಹಾಗೂ ಯಂತ್ರಗಳನ್ನು ಸ್ಥಳದಲ್ಲಿ ಬೀಡುಬಿಟ್ಟಿವೆ. ಈ ಸಂದರ್ಭದಲ್ಲಿ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿದರೆ ಅರ್ಜಿದಾರ ಗಣೇಶ್‌ ಅವರಿಗೆ ಸರಿಪಡಿಸಲಾಗದ ಹಾನಿಯಾಗುತ್ತದೆ. ಹೀಗಾಗಿ, ಅರ್ಜಿ ವಜಾ ಮಾಡಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಕಳೆದ ವರ್ಷ ನಟ ಗಣೇಶ್‌ ಅವರು ಬಂಡೀಪುರ ಅರಣ್ಯದ ಕುಂದುಕರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿ 1.24 ಎಕರೆ ಜಮೀನು ಖರೀದಿಸಿದ್ದು, ಅಲ್ಲಿ ಫಾರ್ಮ್‌ ಹೌಸ್‌ ನಿರ್ಮಿಸುವ ಸಂಬಂಧ ಅನುಮತಿ ಕೋರಿ ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಸಮಿತಿಯು ಷರತ್ತುಗಳನ್ನು ವಿಧಿಸಿ, ತಾತ್ಕಾಲಿಕ ವಾಸದ ಮನೆ ಕಟ್ಟಡ ನಿರ್ಮಿಸಲು ನಿಯಮಾನುಸಾರ ನಡೆದುಕೊಳ್ಳುವ ಕುರಿತು ಮುಚ್ಚಳಿಕೆ ಬರೆಸಿಕೊಂಡು ಅನುಮತಿಸಲಾಗಿತ್ತು.

ಆನಂತರ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರಶ್ನಿಸಿದ್ದರಿಂದ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯು ಕುಂದುಕರೆ ವಲಯ ಅರಣ್ಯಾಧಿಕಾರಿ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಸದರಿ ಜಾಗದಲ್ಲಿ ಜೆಸಿಬಿ ಬಳಕೆ ಮಾಡಿ ಸಮತಟ್ಟು ಮಾಡಿ, ಬೃಹತ್‌ ಕಟ್ಟಡ ನಿರ್ಮಾಣಕ್ಕೆ ತಯಾರಿ ನಡೆಸುತ್ತಿರುವುದು ಕಂಡುಬಂದಿದ್ದು, ಸೂಕ್ಷ್ಮ ಪರಿಸರ ವಲಯದ ಸಮಿತಿ ಹಾಗೂ ಕಚೇರಿ ಪತ್ರದಲ್ಲಿ ನೀಡಿರುವ ಉಲ್ಲಂಘಿಸಿ, ಬೃಹತ್‌ ಶಾಶ್ವತ ಕಟ್ಟಡ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿರುವುದರಿಂದ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಲು ಹಾಗೂ ನಿಯಮಾನುಸಾರ ಕ್ರಮಕೈಗೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿತ್ತು.

ಸಮಿತಿ ಸಭೆಯಲ್ಲಿನ ನಿರ್ಬಂಧ ಹಾಗೂ ಮುಚ್ಚಳಿಕೆ ಪತ್ರದಲ್ಲಿ ಬರೆದುಕೊಟ್ಟಿರುವ ಷರತ್ತುಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಆದ್ದರಿಂದ ಕೂಡಲೇ ಸದರಿ ಕಟ್ಟಡಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲಾತಿ ಅಂದರೆ ಕಟ್ಟಡದ ಅನುಮೋದಿತ ನೀಲನಕ್ಷೆ, ಕಂದಾಯ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳ ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕೆ ಪಡೆದಿರುವ ಅನುಮೋದಿತ ದಾಖಲೆಗಳನ್ನು ಏಳುದಿನಗಳ ಒಳಗೆ ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಯ ಮುಂದೆ ಹಾಜರುಪಡಿಸಬೇಕು. ಮುಂದಿನ ಆದೇಶದವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆದೇಶಿಸಿದ್ದರು. ಇದನ್ನು ವಜಾ ಮಾಡಬೇಕು ಎಂದು ಗಣೇಶ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT