ರಾಜ್ಯ

ಕಾವೇರಿ ವಿವಾದ: ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ- ಸಿಎಂ ಸಿದ್ದರಾಮಯ್ಯ

Lingaraj Badiger

ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದ ರೈತರ ಹಿತ ಬಲಿ ಕೊಡುವುದಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ, ಮೇಕೆದಾಟು, ಅಪ್ಪರ್​ ಕೃಷ್ಣ ಮತ್ತು ಮಹದಾಯಿ ವಿವಾದ ಸಂಬಂಧ ಕೇಂದ್ರದ ಬಳಿಗೆ ಸರ್ವ ಪಕ್ಷಗಳ ನಿಯೋಗ ಕರೆದೊಯ್ಯಲು ನಿರ್ಧಾರ ಮಾಡಲಾಗಿದೆ ಎಂದು ಬುಧವಾರ ಹೇಳಿದ್ದಾರೆ.

ಇಂದು ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಕರ್ನಾಟಕದ ನೀರಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊತ್ತೇವೆ. ಇದಕ್ಕೆ ಸರ್ವ ಪಕ್ಷಗಳು ಸಹ ಸಮ್ಮತಿ ಸೂಚಿಸಿವೆ ಎಂದು ಸಿಎಂ ತಿಳಿಸಿದ್ದಾರೆ.

ಸರ್ವಪಕ್ಷ ನಿಯೋಗ, ಕೇಂದ್ರ ಪರಿಸರ ಸಚಿವರನ್ನು ಸಹ  ಭೇಟಿ ಮಾಡಲಿದ್ದು, ಮೇಕೆದಾಟು ಯೋಜನೆಗೆ ಅರಣ್ಯ ಪ್ರದೇಶದ ಕ್ಲಿಯರೆನ್ಸ್ ನೀಡಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಜಲ ವಿವಾದ, ಭಾಷೆ ಗಡಿ ಬಗ್ಗೆ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ. ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿಲುವುಗಳಿಗೆ ಬೆಂಬಲವಿದೆ ಎಂದು ಸರ್ವ ಪಕ್ಷದ ನಾಯಕರು ಹೇಳಿದ್ದಾರೆ ಎಂದು ಸಿಎಂ ತಿಳಿಸಿದರು.

ರೈತರ ರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಯಾವುದೇ ಕಾರಣಕ್ಕೂ ರೈತರ ಹಿತ ಬಲಿ ಕೊಡಲ್ಲ. ಕಾವೇರಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್​​ನಲ್ಲಿ ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ಸಲಹೆ ನೀಡಿದ್ದೇವೆ. ತಮಿಳುನಾಡು ಅರ್ಜಿ ವಜಾ ಆಗುವಂತೆ ವಾದಮಾಡಿ ಎಂದಿದ್ದೇವೆ. ಬೆಳೆಗಳ ರಕ್ಷಣೆ ಮಾಡಬೇಕು, ಕುಡಿಯುವ ನೀರನ್ನೂ ಕೊಡಬೇಕು ಎಂದರು.

SCROLL FOR NEXT