ರಾಜ್ಯ

ಆಫ್ರಿಕನ್‌ ಹಂದಿ ಜ್ವರ ಭೀತಿ: ರಾಜ್ಯದಲ್ಲಿ ಕಟ್ಟೆಚ್ಚರ; ಕೇರಳ ಗಡಿಯಲ್ಲಿ ಕೋಳಿ-ಹಂದಿ ಸಾಗಣೆಗೆ ನಿಷೇಧ

Manjula VN

ಮೈಸೂರು: ಕೇರಳದಲ್ಲಿ ಮಾರಣಾಂತಿಕ ಆಫ್ರಿಕನ್‌ ಹಂದಿ ಜ್ವರ ಕಾಣಿಸಿಕೊಂಡಿದ್ದು, ಈ ಬೆಳವಣಿಗೆ ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ.

ಇದು ಹಂದಿಗಳಲ್ಲಿ ಕಾಣಿಸಿಕೊಳ್ಳುವ ರೋಗವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಿಂದ ರಾಜ್ಯಕ್ಕೆ ಪ್ರಾಣಿಗಳ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.

ಆಫ್ರಿಕನ್ ಹಂದಿ ಜ್ವರ ಆತಂಕ ಹಿನ್ನೆಲೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಾವಲಿ ಮತ್ತು ಸುಲ್ತಾನ್ ಬತ್ತೇರಿ ಚೆಕ್ ಪೋಸ್ಟ್‌ಗಳಲ್ಲಿ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳ ತಪಾಸಣೆಗಾಗಿ ಪಶುಸಂಗೋಪನಾ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಡಿ ಬಿ ಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂದಿ ಸಾಕಣೆ ಹಾಗೂ ಹಂದಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

ಜೊತೆಗೆ, ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಲು ಇಲಾಖೆ ನಿರ್ಧರಿಸಿದೆ.

ಆಫ್ರಿಕನ್‌ ಹಂದಿ ಜ್ವರವು ವೈರಾಣುವಿನಿಂದ ಹರಡುವ ರೋಗವಾಗಿದ್ದು, ರೋಗಪೀಡಿತ ಹಂದಿಗಳಿಂದ ಆರೋಗ್ಯವಂತ ಹಂದಿಗಳಿಗೆ ನೇರ ಸಂಪರ್ಕದಿಂದ ಹರಡುತ್ತದೆ. ಆಫ್ರಿಕನ್‌ ಹಂದಿಜ್ವರ ಹಂದಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ರೋಗ ಕಾಣಿಸಿಕೊಂಡ ಹಂದಿಗಳಲ್ಲಿ ಕೆಂಪು ಮೂಗು, ಮುಖದ ಮೇಲೆ ಮೊಡವೆಗಳು ಮತ್ತು ತೀವ್ರ ಜ್ವರಗಳು ಕಾಣಿಸಿಕೊಳ್ಳುತ್ತವೆ ಎಂದು ಪಶುವೈದ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಫ್ರಿಕನ್ ಹಂದಿ ಜ್ವರ ರಾಜ್ಯದಲ್ಲಿ ಕಾಲಿಡದಂತೆ ಮಾಡಲು ಗಡಿಯಲ್ಲಿರುವ ಜನರು ಸಹಕಾರ ನೀಡಬೇಕು. ಈಗಾಗಲೇ ಚೆಕ್ ಪೋಸ್ಟ್ ಗಳಲ್ಲಿ ಎರಡು ಪಾಳಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಾಹನಗಳು ಮತ್ತು ಅದರ ಚಾಲಕರ ವಿವರಗಳನ್ನು ದಾಖಲಿಸುತ್ತಿದ್ದಾರೆ. ಸೂಚನಾ ಫಲಕಗಳನ್ನು ಕೂಡ ಹಾಕಿದ್ದಾರೆಂದು ತಿಳಿಸಿದ್ದಾರೆ.

SCROLL FOR NEXT