ರಾಜ್ಯ

ಅಕ್ರಮ ಭೂ ಮಂಜೂರಾತಿ ಪ್ರಕರಣ: ಕೆಎಎಸ್‌ ಅಧಿಕಾರಿ ಬಂಧನ

Srinivasamurthy VN

ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಅಕ್ರಮ ಭೂಮಂಜೂರಾತಿ ಪ್ರಕರಣದಲ್ಲಿ ಈ ಹಿಂದಿನ ತಹಶೀಲ್ದಾರ್ ಜೆ.ಉಮೇಶ್ ಅವರನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನ ಉಳ್ಳಿನಾಗರು ಗ್ರಾಮದ ಸರ್ವೆ ನಂಬರ್ 43ರಲ್ಲಿ 5 ಎಕರೆ 4 ಗುಂಟೆ ಸರ್ಕಾರಿ ಜಮೀನನ್ನು ಹನುಮಂತಯ್ಯ ಬಿನ್‌ ಚಿಕ್ಕಣ್ಣ ಎಂಬುವರ ಹೆಸರಿಗೆ ಖಾತೆ ದಾಖಲಿಸಿ ನಂತರ ಪೌತಿ ಖಾತೆ, ದಾನಪತ್ರ, ಕ್ರಯಪತ್ರ ಮಾಡಲಾಗಿದೆ. ಇದು ನಿಯಮ ಬಾಹಿರವಾಗಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸೂಚಿಸಿದ್ದರು.

ಅದರ ಅನ್ವಯ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಅವರು ಆ.12ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿರಸ್ತೆದಾರ್ ನಂಜುಂಡಯ್ಯ, ಕಂದಾಯ ನಿರೀಕ್ಷಕ ಕಿರಣ್‌ಕುಮಾರ್ ಅವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಜೆ.ಉಮೇಶ್ ಅವರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಕಡೂರಿಗೆ ಕರೆತಂದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕಿರಿಯ ಶ್ರೇಣಿ ಕೆಎಎಸ್‌ ಆಧಿಕಾರಿ ಆಗಿರುವ ಜೆ.ಉಮೇಶ್, ಸದ್ಯ ಕಾರವಾರದಲ್ಲಿ ಸೀಬರ್ಡ್‌ ನೌಕಾನೆಲೆಯ ಭೂಸ್ವಾಧೀನಾಧಿಕಾರಿಯಾಗಿದ್ದಾರೆ.

ಇನ್ನೂ ಹಲವು ಕಂದಾಯ ಅಧಿಕಾರಿಗಳ ಬಂಧನ ಸಾಧ್ಯತೆ
ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿದ್ದ ಮೂವರು ತಹಶೀಲ್ದಾರ್ ಉಮೇಶ್, ನಿವೃತ್ತ ಶಿರಸ್ತೇದಾರ್ ನಂಜುಂಡಯ್ಯ ಮತ್ತು ಆರ್​​ಐ ಕಿರಣ್ ಕುಮಾರ್ ವಿರುದ್ಧ ಭೂಕಂದಾಯ ಕಾಯ್ದೆ 1964ರ ಕಲಂ 192‌A(2) ಸೆಕ್ಷನ್ ಅಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಕಡೂರು ತಾಲೂಕಿನಲ್ಲೇ 3 ಸಾವಿರ ಎಕರೆ ಕಂದಾಯ ಭೂಮಿ ಕಬಳಿಕೆಯಾಗಿದ್ದು, ಕಡೂರು ತಾಲೂಕಿನ ಇನ್ನೂ ಹಲವು ಕಂದಾಯ ಅಧಿಕಾರಿಗಳ ಬಂಧನ ಸಾಧ್ಯತೆಯಿದೆ.

ಏನಿದು ಪ್ರಕರಣ?
ಉಮೇಶ್ ಈ ಹಿಂದೆ ಕಡೂರು ತಾಲೂಕಿನ ತಹಶಿಲ್ದಾರ್ ಆಗಿದ್ದರು. ಕಂದಾಯ ಭೂಮಿ ಪರಭಾರೆ ಹಗರಣದಲ್ಲಿ ಭಾಗಿ ಹಿನ್ನೆಲೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಉಮೇಶ್ ವಿರುದ್ಧ ದೂರು ದಾಖಲಾಗಿತ್ತು. ಜಿಲ್ಲಾಡಳಿತ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಸರ್ಕಾರ ಇತ್ತೀಚೆಗೆ 15 ತಹಶಿಲ್ದಾರುಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿತ್ತು. ಕಡೂರು ತಾಲೂಕಿನಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖಾ ತಂಡ ವರದಿ ಸಲ್ಲಿಸಿತ್ತು.

ಕಡೂರು ತಾಲೂಕಿನಲ್ಲೇ ಮೂರು ಸಾವಿರ ಎಕರೆ ಕಂದಾಯ ಭೂಮಿ ಗುಳುಂ ಆಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನ ಪ್ರಭಾವಿಗಳಿಗೆ ಪರಭಾರೆ ಮಾಡಿರುವುದು ಮೆಲ್ನೋಟಕ್ಕೆ ದೃಢಪಟ್ಟಿದೆ. ಉಮೇಶ್​​ ಈ ಹಿಂದೆ ಕಡೂರು ತಹಶಿಲ್ದಾರ್ ಆಗಿದ್ದ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಕಂದಾಯ ಭೂಮಿ ಪರಭಾರೆ ಮಾಡಿದ್ದಾರೆ ಎನ್ನಲಾಗಿದೆ.
 

SCROLL FOR NEXT