ಬೆಂಗಳೂರು: ಚಂದ್ರಯಾನ-3 ಯಶಸ್ಸು ಕೇವಲ ಭಾರತೀಯರು ಮಾತ್ರವಲ್ಲದೆ ಜಗತ್ತಿನಾದ್ಯಂತ ವಿಜ್ಞಾನವನ್ನು ನಂಬುವ ಜನರಲ್ಲಿ ಉತ್ಸಾಹ ತುಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚಂದ್ರಯಾನ-3ರ ಕಾರ್ಯಾಚರಣೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಇಂದು ಬೆಳಗ್ಗೆ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರೀಸ್ ನಿಂದ ಭಾರತಕ್ಕೆ ಹಿಂದಿರುಗಿದ ಕೂಡಲೇ ಬೆಂಗಳೂರಿಗೆ ಹೋಗಿ ಚಂದ್ರಯಾನ-3 ಯಶಸ್ಸಿನ ಹಿಂದಿನ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲು ನಿರ್ಧರಿಸಿದ್ದಾಗಿ ತಿಳಿಸಿದರು.
ಬೆಂಗಳೂರಿಗೆ ಯಾವಾಗ ತಲುಪುತ್ತೇನೆ ಎಂಬುದು ಸರಿಯಾಗಿ ತಿಳಿದಿಲ್ಲದ ಕಾರಣ ಬರಮಾಡಿಕೊಳ್ಳಲು ಯಾವುದೇ ತೊಂದರೆ ತೆಗೆದುಕೊಳ್ಳದಂತೆ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೆ. ಚಂದ್ರಯಾನ-3 ಯಶಸ್ಸಿನಿಂದ ಇಸ್ರೋ ವಿಜ್ಞಾನಿಗಳು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಸಮರ್ಪಣೆ ಮತ್ತು ಉತ್ಸಾಹವು ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರದ ಸಾಧನೆಗಳ ಹಿಂದಿನ ಪ್ರೇರಕ ಶಕ್ತಿಗಳಾಗಿವೆ ಎಂದು ತಿಳಿಸಿದರು.
ನಂತರ ವಿಮಾನ ನಿಲ್ದಾಣದಿಂದ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ತೆರೆದ ವಾಹನದಲ್ಲಿ ತೆರಳಿದ ಪ್ರಧಾನಿ ಮೋದಿಗೆ ಜನರಿಂದ ಅಭೂತಪೂರ್ವ ಸ್ವಾಗತ ದೊರೆಯಿತು.