ರಾಮನಗರ: ಕಾಲೇಜು ಆವರಣದಲ್ಲೇ ಯುವತಿಗೆ ಇರಿದು ಆಕೆಯನ್ನು ಕಾರಿನಲ್ಲಿ ಅಪಹರಣ ಮಾಡಿರುವ ಘಟನೆ ಕರ್ನಾಟಕದ ರಾಮನಗರದಲ್ಲಿ ವರದಿಯಾಗಿದೆ.
ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಚಾಕುವಿನಿಂದ ಇರಿದು ಅಪಹರಿಸಿದ ಆಘಾತಕಾರಿ ಘಟನೆ ಸೋಮವಾರ ರಾಮನಗರ ಜಿಲ್ಲೆಯಲ್ಲಿ ನಡೆದಿದ್ದು, ನಂತರ ಅಪಹರಣಕಾರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ವಿದ್ಯಾರ್ಥಿನಿಯನ್ನು ಐಸಿಯುಗೆ ದಾಖಲಿಸಲಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, 'ರಾಮನಗರ ನಗರದ ಕಾಲೇಜು ಪ್ರವೇಶ ದ್ವಾರದಲ್ಲಿ ಆರೋಪಿ ಮತ್ತು ಆತನ ಸಹಚರರು ವಿದ್ಯಾರ್ಥಿನಿಗೆ ಅಡ್ಡಗಟ್ಟಿ ನೋಡ ನೋಡುತ್ತಲೇ ಆಕೆಯ ಆಕೆಯ ಭುಜ ಮತ್ತು ಕೈಗಳಿಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಕೆ ಕುಸಿದು ಬಿದ್ದಾಗ ಅಪಹರಣಕಾರರು ಆಕೆಯನ್ನು ತಮ್ಮ ಕಾರಿನೊಳಗೆ ಎಳೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳೀಯರು ಮತ್ತು ವಿದ್ಯಾರ್ಥಿಗಳು ತಡೆಯಲು ಯತ್ನಿಸಿದರಲ್ಲದೇ ಕಾರಿಗೆ ಕಲ್ಲು ತೂರಾಟ ನಡೆಸಿದರೂ ಅಪಹರಣಕಾರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯನ್ನು ರಾಮಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಕೂಡಲೇ ಪೊಲೀಸರು ಆಸ್ಪತ್ರೆಗೆ ತೆರಳಿ ಅಪಹರಣಕಾರ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ರಾಮನಗರ ಜಿಲ್ಲೆಯ ಒಂದೇ ಗ್ರಾಮದ ನಿವಾಸಿಗಳಾಗಿದ್ದು, ಯುವತಿಯನ್ನು ಯುವಕ ಪ್ರೀತಿಸುತ್ತಿದ್ದನಾದರೂ ಆಕೆ ನಿರಾಕರಿಸಿದ್ದಳು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಆತ ಆಕೆಯ ಮೇಲೆ ದಾಳಿ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ನಿಖರವಾದ ಕಾರಣವನ್ನು ಶೀಘ್ರದಲ್ಲೇ ಕಂಡುಹಿಡಿಯಲಾಗುವುದು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.