ರಾಜ್ಯ

ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ, ಆಮ್ಲಜನಕ ಇರುವುದನ್ನು ಖಚಿತಪಡಿಸಿದ ಪ್ರಗ್ಯಾನ್ ರೋವರ್

Lingaraj Badiger

ಬೆಂಗಳೂರು: ಚಂದಿರನ ಅಂಗಳದ ಸಂಚರಿಸುತ್ತಿರುವ ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ರೋವರ್‌ನಲ್ಲಿರುವ ಲೇಸರ್-ಪ್ರೇರಿತ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಉಪಕರಣವು 'ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಗಂಧಕದ ಉಪಸ್ಥಿತಿಯನ್ನು ಮೊದಲ ಬಾರಿಗೆ ಮಾಪನಗಳ ಮೂಲಕ ಖಚಿತಪಡಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಂಗಳವಾರ ತಿಳಿಸಿದೆ.

ನಿರೀಕ್ಷಿಸಿದಂತೆ, ಪ್ರಗ್ಯಾನ್ ರೋವರ್‌, ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಪತ್ತೆ ಮಾಡಿದೆ ಎಂದು ಇಸ್ರೋ ಹೇಳಿದೆ.

"ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳು ಮುಂದುವರೆಯುತ್ತಿವೆ...ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್(LIBS) ಉಪಕರಣವು ದಕ್ಷಿಣ ಧ್ರುವದ ಸಮೀಪವಿರುವ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ (S) ಇರುವಿಕೆಯನ್ನು ದೃಢಪಡಿಸಿದೆ" ಎಂದು ಇಸ್ರೋ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.

ಪ್ರಾಥಮಿಕ ವಿಶ್ಲೇಷಣೆಗಳನ್ನು ಗ್ರಾಫ್ ಮೂಲಕ ನಿರೂಪಿಸಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇರುವಿಕೆಯನ್ನು ಅನಾವರಣಗೊಳಿಸಿದೆ. ಹೆಚ್ಚಿನ ಮಾಪನಗಳು ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವಿಕೆಯನ್ನು ಬಹಿರಂಗಪಡಿಸಿವೆ. ಹೈಡ್ರೋಜನ್ ಇರುವಿಕೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT