ರಾಜ್ಯ

ಮುಂಗಾರು ಕೊರತೆ: ಆವಿಯಾಗುತ್ತಿರುವ ತೇವಾಂಶ, ಹೆಚ್ಚುತ್ತಿರುವ ಒಣಹವೆ; ಮಳೆಗಾಲದಲ್ಲಿ ಬಿರುಬೇಸಿಗೆಯ ಅನುಭವ!

Shilpa D

ಬೆಂಗಳೂರು: ರಾಜ್ಯಾದ್ಯಂತ ಮಳೆಯಿಲ್ಲದೇ ಬಿರುಬಿಸಿಲಿನ ಆರ್ಭಟ ಜೋರಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ತಾಪಮಾನ 2-4 ಡಿಗ್ರಿ ಸೆಲ್ಸಿಯಸ್ ಹೆಚ್ಚಿರುವುದರಿಂದ ಅಕ್ಷರಶಃ ಜನತೆಗೆ ಬೇಸಿಗೆ ಕಾಲದ ಅನುಭವವಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳ ಪ್ರಕಾರ, ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ  ಮರ್ಕ್ಯೂರಿ ಸುಮಾರು 6 ಡಿಗ್ರಿ ಸೆಲ್ಸಿಯಸ್‌ಗೆ ಜಿಗಿದಿದೆ. ಮಂಡ್ಯ ಜಿಲ್ಲೆಯಲ್ಲಿ ಬಿಸಿಲ ಶಾಖ ತೀವ್ರ ಏರಿಕೆ ಕಂಡುಬಂದಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳ ಸಂಖ್ಯೆ ಜುಲೈ ಅಂತ್ಯದಲ್ಲಿ 14 ರಿಂದ  20 ಜಿಲ್ಲೆಗಳಿಗೆ ಏರಿಕೆಯಾಗಿದೆ. ಈ ಜಿಲ್ಲೆಗಳು ಶೇ.20-45ರಷ್ಟು ಮಳೆ ಕೊರತೆ ದಾಖಲಿಸಿವೆ. ಜೂನ್ 1 ರಂದು ಮುಂಗಾರು ಆರಂಭವಾದಾಗಿನಿಂದ ರಾಜ್ಯದಲ್ಲಿ 666 ಮಿ.ಮೀ ಮಳೆಯಾಗಬೇಕಿತ್ತು, ಆದರೆ ಕೇವಲ 485 ಮಿ.ಮೀ ಮಳೆ ದಾಖಲಾಗಿದೆ. ಈ ದೀರ್ಘಕಾಲದ ಒಣ ಹವೆಯಿಂದ ತಾಪಮಾನದಲ್ಲಿ ಹೆಚ್ಚಳವಾಗಿದೆ.

ಐಎಂಡಿ ಹವಾಮಾನ ವರದಿ ಪ್ರಕಾರ ಮಂಡ್ಯದಲ್ಲಿ ಭಾನುವಾರ ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಗದಗದಲ್ಲಿ ವಾಡಿಕೆಗಿಂತ 4 ಡಿಗ್ರಿ ಸೆಲ್ಸಿಯಸ್ ಅಧಿಕ ಅಂದರೆ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು, ಕಲಬುರಗಿ, ಮಂಗಳೂರು, ಬೀದರ್ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 3 ಡಿಗ್ರಿ ಸೆಲ್ಸಿಯಸ್‌ನಷ್ಟು ವ್ಯತ್ಯಾಸವಾಗಿದೆ. ಕನಿಷ್ಠ ತಾಪಮಾನದಲ್ಲೂ ವ್ಯತ್ಯಯವಾಗಿದೆ. ವಿಜಯಪುರದಲ್ಲಿ ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ಮತ್ತು ಬೆಳಗಾವಿಯಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದೆ.

  

ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಮಾಜಿ ಕುಲಸಚಿವ ಪ್ರೊ. ಎಂ.ಬಿ.ರಾಜೇಗೌಡ ಮಾತನಾಡಿ, ಮಳೆ ಬಾರದೆ ಮಣ್ಣಿನಲ್ಲಿ ತೇವಾಂಶ ಆವಿಯಾಗುವುದು ಹೆಚ್ಚಾಗಿ, ಒಣಗುತ್ತಿದೆ. ಇದು ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಇವು ಜಾಗತಿಕ ತಾಪಮಾನದ ಚಿಹ್ನೆಗಳು. ವ್ಯವಸ್ಥಿತ ಮಳೆಯಾಗಿದ್ದರೆ, ತಾಪಮಾನವು ಕಡಿಮೆ ಇರುತ್ತದೆ.

ರಾಜ್ಯದಲ್ಲಿ ತಾಪಮಾನ ಏರುತ್ತಲೇ ಇದೆ, ಸದ್ಯ ನಾವು ಋತುಚಕ್ರದ ಅರ್ಧದಲ್ಲಿದ್ದೇವೆ, ಅಂದರೆ ಕಳೆದ ಆರು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ ಮತ್ತು ಮುಂದಿನ ಆರು ವರ್ಷಗಳಲ್ಲಿ ಅದು ಕೆಟ್ಟದಾಗಿರಬಹುದು. ತಾಪಮಾನ ಮತ್ತು ಒಣ ಹವೆ ಹೆಚ್ಚಳವು ಬೆಳೆ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದರು.

ಮಳೆಗೆ ಅನುಕೂಲಕರವಾದ ಯಾವುದೇ ಚಿಹ್ನೆಗಳು ಅಥವಾ ಹವಾಮಾನ ವ್ಯವಸ್ಥೆಗಳಿಲ್ಲ (ಪ್ರತ್ಯೇಕ ಪ್ರದೇಶಗಳನ್ನು ಹೊರತುಪಡಿಸಿ). ಬಂಗಾಳಕೊಲ್ಲಿ ಅಥವಾ ಹಿಂದೂ ಮಹಾಸಾಗರದ ಮೇಲೆ ಯಾವುದೇ ವ್ಯವಸ್ಥೆ ರೂಪುಗೊಂಡಿಲ್ಲ. ಇದು ಸೆ.7ರ ವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಅಭಾವದ ಮಳೆ ಹಾಗೂ ತಾಪಮಾನ ಏರಿಕೆಯಿಂದ ಜಲಮೂಲಗಳಿಂದ ನೀರು ಆವಿಯಾಗುವಿಕೆಯೂ ಹೆಚ್ಚಾಗಿದ್ದು ಆತಂಕಕಾರಿಯಾಗಿದೆ.

ನಾವು ಮಾನ್ಸೂನ್‌ನಲ್ಲಿದ್ದೇವೆ ಆದರೆ ಇದು ಬೇಸಿಗೆಯಂತೆ ಭಾಸವಾಗುತ್ತದೆ. ಈ ಹವಾಮಾನ ವೈಪರೀತ್ಯದೊಂದಿಗೆ, ಚಳಿಗಾಲದಲ್ಲಿ ವಿಪರೀತ ಚಳಿಯ ಸಾಧ್ಯತೆಗಳಿವೆ ಎಂದು ಕೆಎಸ್‌ಎನ್‌ಡಿಎಂಸಿ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ವಿವರಿಸಿದ್ದಾರೆ.

SCROLL FOR NEXT